ADVERTISEMENT

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿರುದ್ಧ ಸಿಎಂ ಜಗನ್‌ಮೋಹನ್ ರೆಡ್ಡಿ ಆರೋಪ

ಮುಖ್ಯ ನ್ಯಾಯಮೂರ್ತಿಗೆ ಪತ್ರ

ಏಜೆನ್ಸೀಸ್
Published 11 ಅಕ್ಟೋಬರ್ 2020, 8:47 IST
Last Updated 11 ಅಕ್ಟೋಬರ್ 2020, 8:47 IST
   

ಹೈದರಾಬಾದ್‌: ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಮತ್ತು ಆಂಧ್ರ ಪ್ರದೇಶ ಹೈಕೋರ್ಟ್‌ ನಡುವಿನ ತಿಕ್ಕಾಟ ಮತ್ತಷ್ಟು ಹೆಚ್ಚಿದ್ದು, ಮುಖ್ಯಮಂತ್ರಿಯು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿರುದ್ಧ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.

ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿಯ (ಟಿಡಿಪಿ) ಪರವಾಗಿ ಸರ್ಕಾರವನ್ನು ಅತಂತ್ರಗೊಳಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್‌.ವಿ.ರಮಣ ಪ್ರಯತ್ನಿಸುತ್ತಿರುವುದಾಗಿ ಆರೋಪಿಸಲಾಗಿದೆ.

ಚಂದ್ರಬಾಬು ನಾಯ್ಡು ಅವರಿಗೆ ನ್ಯಾಯಮೂರ್ತಿ ರಮಣ ಅವರು ಆಪ್ತರಾಗಿದ್ದಾರೆ ಹಾಗೂ ಟಿಡಿಪಿಗೆ ಸಹಕಾರ ನೀಡಲು ಹಸ್ತಕ್ಷೇಪ ಮಾಡುತ್ತಿದ್ದಾರೆ, ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾಗ ನ್ಯಾಯಸ್ಥಾನದ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅವರಿಗೆ ಸಿಎಂ ಜಗನ್‌ಮೋಹನ್‌ ರೆಡ್ಡಿ ಪತ್ರ ಬರೆದಿದ್ದಾರೆ. ಆ ಕುರಿತು ಶನಿವಾರ ಸಿಎಂ ಪ್ರಧಾನ ಸಲಹೆಗಾರರಾಗಿರುವ ಅಜೇಯ ಕಲ್ಲಾಂ ಮಾಹಿತಿ ನೀಡಿದ್ದಾರೆ.

ADVERTISEMENT

ಎನ್‌.ವಿ.ರಮಣ ಅವರು ಸುಪ್ರೀಂ ಕೋರ್ಟ್‌ನಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ ಹಾಗೂ ಬೋಬ್ಡೆ ಅವರ ನಂತರ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕವಾಗುವ ಸಾಧ್ಯತೆ ಇರುವುದರಿಂದ ಆಂಧ್ರ ಸರ್ಕಾರದ ಆರೋಪ ಚರ್ಚೆಗೆ ಗ್ರಾಸವಾಗಿದೆ.

'ನ್ಯಾಯಾಂಗದ ನಿರ್ಧಾರಗಳನ್ನು ಬಹಿರಂಗವಾಗಿ ಟೀಕಿಸುವುದು ನ್ಯಾಯಾಂಗ ನಿಂದನೆಯಾಗಬಹುದು. ಆದರೆ, ನ್ಯಾಯಾಂಗದ ಮೇಲೆ ರಾಜ್ಯ ಸರ್ಕಾರ ಅಪಾರವಾದ ಗೌರವ ಹೊಂದಿರುವುದನ್ನು ಸಿಎಂ ಪತ್ರವು ತಿಳಿಸುತ್ತದೆ' ಎಂದುಅಜೇಯ ಕಲ್ಲಾಂ ಹೇಳಿದ್ದಾರೆ. ಹೈಕೋರ್ಟ್‌ನ ಹಲವು ನ್ಯಾಯಮೂರ್ತಿಗಳ ಮೇಲೆ ರಮಣ ಅವರು ಪ್ರಭಾವ ಬೀರಿರುವ ಬಗ್ಗೆ ಸುಪ್ರೀಂ ಕೋರ್ಟ್‌ನ ಗಮನ ಸೆಳೆಯುವುದೂ ಪತ್ರದ ಉದ್ದೇಶವಾಗಿದೆ ಎಂದು ಹೇಳಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿದೆ.

2019ರ ಮೇನಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಅಧಿಕಾರ ವಹಿಸಿದ ನಂತರ ಚಂದ್ರಬಾಬು ನಾಯ್ಡು ಅಧಿಕಾರ ಅವಧಿಯಲ್ಲಿ (2014 ಜೂನ್‌ನಿಂದ ಮೇ 2019) ನಡೆದಿರುವ ಎಲ್ಲ ಒಪ್ಪಂದಗಳ ಕುರಿತು ವಿಚಾರಣೆ ನಡೆಸುವಂತೆ ಸಿಎಂ ಜಗನ್‌ಮೋಹನ್‌ ರೆಡ್ಡಿ ಆದೇಶಿಸಿದ್ದಾರೆ. ಅಂದಿನಿಂದಲೂ ರಾಜ್ಯದಲ್ಲಿ ನ್ಯಾಯಾಂಗದ ಮೇಲೆ ನ್ಯಾಯಮೂರ್ತಿ ಎನ್‌.ವಿ.ರಮಣ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.