ADVERTISEMENT

ಆಂಧ್ರಪ್ರದೇಶ| ರೈಲಿಗೆ ಬೆಂಕಿ: ವೃದ್ಧ ಸಾವು; ಅಪಾಯದಿಂದ ಪಾರಾದ 143 ಪ್ರಯಾಣಿಕರು

ಪಿಟಿಐ
Published 29 ಡಿಸೆಂಬರ್ 2025, 14:16 IST
Last Updated 29 ಡಿಸೆಂಬರ್ 2025, 14:16 IST
   

ಹೈದರಾಬಾದ್‌/ವಿಶಾಖಪಟ್ಟಣ: ಟಾಟಾನಗರ– ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳು ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಯಲಮಂಚಿಲಿಯಲ್ಲಿ ಅಗ್ನಿಗೆ ಆಹುತಿಯಾಗಿದ್ದು, ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಈ ಎರಡು ಬೋಗಿಗಳಲ್ಲಿದ್ದ 143 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಭಾನುವಾರ ತಡರಾತ್ರಿ 12.45ರ ವೇಳೆಗೆ ಈ ಬೆಂಕಿ ಅವಘಡ ಸಂಭವಿಸಿದ್ದು, ಬಿ1 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಚಂದ್ರಶೇಖರ ಸುಂದರ್‌ (70) ಎಂಬವರು ಮೃತಪಟ್ಟಿದ್ದಾರೆ.

ADVERTISEMENT

ಮೊದಲಿಗೆ ಬಿ1 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಲೋಕೊ ಪೈಲಟ್‌ ರೈಲು ನಿಲ್ಲಿಸಿದ್ದಾರೆ. ಅಷ್ಟರಲ್ಲೇ ಎಂ2 ಬೋಗಿಗೂ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ರೈಲು ನಿಲ್ಲಿಸಿದ ಬಳಿಕ ಸಿಬ್ಬಂದಿಯು ಈ ಎರಡೂ ಬೋಗಿಗಳನ್ನು ಪ್ರತ್ಯೇಕಿಸಿ ಭಾರಿ ಅನಾಹುತ ತಪ್ಪಿಸಿದ್ದಾರೆ.

ಯಲಮಂಚಿಲಿ ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆ, ಬೆಂಕಿ ಹೊತ್ತಿಕೊಂಡಿದ್ದ ಎರಡೂ ಬೋಗಿಗಳಲ್ಲಿದ್ದ ಪ್ರಯಾಣಿಕರು ಪ್ರಾಣ ಭೀತಿಯಿಂದ ಹೊರ ಓಡಿಬಂದಿದ್ದಾರೆ. ವಯೋವೃದ್ಧರಾಗಿದ್ದರಿಂದ ಚಂದ್ರಶೇಖರ ಅವರಿಗೆ ಬೋಗಿಯಿಂದ ಬೇಗ ಕೆಳಗಿಳಿಯಲಾಗದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿಯು ಎರಡು ತಾಸಿಗೂ ಹೆಚ್ಚಿನ ಅವಧಿ ಹರಸಾಹಸ ನಡೆಸಿ ಬೋಗಿಗಳಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿತು.

ಬೋಗಿಯೊಳಗೆ ಹಾಸುವ ಬಟ್ಟೆಗಳನ್ನು ಸಂಗ್ರಹಿಸಿಟ್ಟಿದ್ದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಮೃತರ ಕುಟುಂಬ ವರ್ಗಕ್ಕೆ ಪರಿಹಾರ ನೀಡಲಾಗುವುದು. ಹಾನಿಗೀಡಾದ ಎರಡು ಬೋಗಿಗಳನ್ನು ಬೇರ್ಪಡಿಸಿದ ನಂತರ ರೈಲು ತನ್ನ ಸಂಚಾರ ಮುಂದುವರಿಸಿದೆ. ಅಗ್ನಿ ಅವಘಡದ ಕುರಿತು ತನಿಖೆ ನಡೆದಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯ ವಿಜಯವಾಡ ವಿಭಾಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.