ADVERTISEMENT

ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹ: 25 ಸಾವು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 19:26 IST
Last Updated 20 ನವೆಂಬರ್ 2021, 19:26 IST
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಜಲಾವೃತಗೊಂಡ ರಸ್ತೆಯಲ್ಲೇ ಜನರು ಸಾಗಿದರು –ಪಿಟಿಐ ಚಿತ್ರ
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಜಲಾವೃತಗೊಂಡ ರಸ್ತೆಯಲ್ಲೇ ಜನರು ಸಾಗಿದರು –ಪಿಟಿಐ ಚಿತ್ರ   

ಅಮರಾವತಿ: ಆಂಧ್ರಪ್ರದೇಶದಲ್ಲಿ ಶುಕ್ರವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕಡಪಾ, ಅನಂತಪುರ ಹಾಗೂ ಚಿತ್ತೂರು ಜಿಲ್ಲೆಗಳಲ್ಲಿ ಈವರೆಗೆ 25 ಜನರು ಮೃತಪಟ್ಟಿದ್ದು, ಇನ್ನೂ 17 ಜನರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಕಡಪಾ ಜಿಲ್ಲೆಯ ಚೆಯ್ಯೇರು ನದಿಯಲ್ಲಿ ಶುಕ್ರವಾರ ದಿಢೀರ್ ಉಂಟಾದ ಪ್ರವಾಹದಲ್ಲಿ 30ಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿದ್ದರು. ಅನಂತಪುರದ ಕದಿರಿ ಪಟ್ಟಣದಲ್ಲಿ ಮಳೆಯ ಹೊಡೆತಕ್ಕೆ ನಿರ್ಮಾಣ ಹಂತದ ಕಟ್ಟಡವೊಂದು ಪಕ್ಕದ ಕಟ್ಟಡದ ಮೇಲೆ ಕುಸಿದಿದ್ದು, ಇಬ್ಬರು ಮಕ್ಕಳು ಸೇರಿ ಆರು ಜನರುಮೃತಪಟ್ಟಿದ್ದಾರೆ.

ವೈಮಾನಿಕ ಸಮೀಕ್ಷೆ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರು ಪ್ರವಾಹಪೀಡಿತ ಪ್ರದೇಶಗಳಲ್ಲಿ ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಮೃತರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ಘೋಷಿಸಲಾಗಿದೆ.

ADVERTISEMENT

ನೆಲ್ಲೂರು ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗುತ್ತಿದ್ದು, ಪೆನ್ನಾರ್ ನದಿಯು ಹಲವು ಗ್ರಾಮಗಳನ್ನು ಜಲಾವೃತ ಮಾಡಿದೆ. ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ.

ತಮಿಳುನಾಡಿನಲ್ಲಿ ಶೇ 68ರಷ್ಟು ಅಧಿಕ ಮಳೆ: ತಮಿಳುನಾಡಿನಲ್ಲಿ ಅಬ್ಬರದ ಹಿಂಗಾರು ಮಳೆಯಾಗಿದ್ದು, ವಾಡಿಕೆಗಿಂತ ಶೇ 68ರಷ್ಟು ಹೆಚ್ಚು ಮಳೆ ಸುರಿದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿವೆ.

ಸಹಜಸ್ಥಿತಿಗೆ ಶಬರಿಮಲೆ ಯಾತ್ರೆ: ಕೇರಳದಪತ್ತಣಂತಿಟ್ಟಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು ಶಬರಿಮಲೆ ಯಾತ್ರೆ ಸಹಜಸ್ಥಿತಿಗೆ ಮರಳಿದೆ. ಭಕ್ತರಿಗೆ ಶಬರಿಮಲೆಗೆ ಪಾದಯಾತ್ರೆ ತೆರಳಲು ಶನಿವಾರ ಮಧ್ಯಾಹ್ನದ ಬಳಿಕ ಅನುಮತಿ ನೀಡಲಾಗಿದೆ.ಸತತ ಮಳೆಯಿಂದ ಪಂಬಾ ನದಿಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಹೀಗಾಗಿ ಶನಿವಾರದ ಶಬರಿಮಲೆ ಪಾದಯಾತ್ರೆಯನ್ನು ನಿರ್ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.