ಇಂಫಾಲ್: ಮಣಿಪುರದ ಕಾಕ್ಚಿಂಗ್ ಮತ್ತು ಇಂಫಾಲ್ ಜಿಲ್ಲೆಗಳಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಇತರ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ನಿಷೇಧಿತ ಉಗ್ರ ಸಂಘಟನೆ ಕಾಂಗ್ಲಿಪಾಕ್ ಕಮ್ಯುನಿಸ್ಟ್ ಪಾರ್ಟಿಗೆ (ಪಿಡಬ್ಲ್ಯುಜಿ) ಸೇರಿದ 45 ವರ್ಷದ ಸದಸ್ಯನನ್ನು ಲಮ್ಸಾಂಗ್ ಬಜಾರ್‌ನಿಂದ ಬುಧವಾರ ಬಂಧಿಸಲಾಗಿದೆ. ಇಂಫಾಲ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪ ಈತನ ಮೇಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾಕ್ಚಿಂಗ್ ಜಿಲ್ಲೆಯ ಟೊಕ್‌ಪಾಚಿಂಗ್ ಮೊಯಿರಂಗ್‌ಖೋಮ್ ಗಿರಿ ಶ್ರೇಣಿ ಪ್ರದೇಶದಲ್ಲಿ ಮ್ಯಾಗಜಿನ್‌ಗಳಿಲ್ಲದ ಎರಡು ಎಸ್‌ಎಂಜಿ ಕಾರ್ಬೈನ್‌ಗಳು, ಮ್ಯಾಗಜಿನ್ ಸಹಿತ ಒಂದು ಪಾಯಿಂಟ್ 303 ರೈಫಲ್, ಒಂದು ಒಂಟಿ ನಳಿಕೆ ಬಂದೂಕು, ಎರಡು ಜೋಡಿ ನಳಿಕೆ ಬಂದೂಕುಗಳು, ಒಂದು ಮಾರ್ಪಡಿಸಿದ ಸ್ನೈಪರ್ ರೈಫಲ್, ಮ್ಯಾಗಜಿನ್ ಸಹಿತ ಒಂದು ಮಾರ್ಪಡಿಸಿದ 9 ಎಂಎಂ ಪಿಸ್ತೂಲ್, ಮೂರು ಮಾರ್ಟರ್ ಶೆಲ್‌ಗಳು, ಎರಡು ಕಚ್ಚಾ ಬಾಂಬ್‌ಗಳು, ಎರಡು ಗ್ರೆನೇಡ್‌ಗಳು ಹಾಗೂ ಮದ್ದುಗುಂಡುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಇಂಫಾಲ್ ಪೂರ್ವ ಜಿಲ್ಲೆಯ ಶಾಲೆಯ ಎದುರಿನ ಯಾರಲ್‌ಪತ್ ಪ್ರದೇಶದಲ್ಲಿಯೂ ಶಸ್ತ್ರಾಸ್ತ್ರಗಳು, ಮದ್ದುಗುಂಡು ಹಾಗೂ ಇತರ ಯುದ್ಧ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.