ADVERTISEMENT

ಮಧ್ಯಪ್ರದೇಶದಲ್ಲಿರುವ ಸೇನೆಯ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ: ಸಿಂಗ್

ಏಜೆನ್ಸೀಸ್
Published 19 ಏಪ್ರಿಲ್ 2021, 13:47 IST
Last Updated 19 ಏಪ್ರಿಲ್ 2021, 13:47 IST
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌   

ಭೋಪಾಲ್:ಕೋವಿಡ್‌-19 ಸಾಂಕ್ರಾಮಿಕದ ಈ ಸಂದರ್ಭದಲ್ಲಿ ರಾಜ್ಯದಲ್ಲಿರುವ ಸೇನಾ ಆಸ್ಪತ್ರೆಗಳು ಸಾರ್ವಜನಿಕರಿಗೆ ಚಿಕಿತ್ಸೆ ನೀಡಲು ಮುಕ್ತವಾಗಿರಲಿವೆ ಎಂದು ಅಲ್ಲಿನ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚವ್ಹಾಣ್ ಅವರಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಚವ್ಹಾಣ್ ಅವರು ರಾಜ್ಯದಲ್ಲಿನ ಕೋವಿಡ್‌ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚಿಸಿದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ,ಸೋಂಕು ನಿಯಂತ್ರಣಕ್ಕೆ ಆಮ್ಲಜನಕ, ರೆಮ್‌ಡಿಸಿವಿರ್‌ ಲಸಿಕೆ ಸೇರಿದಂತೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ADVERTISEMENT

ಸೇನೆಯ ಆಸ್ಪತ್ರೆಗಳನ್ನು ತೆರೆಯುವ ಸಂಬಂಧ ರಕ್ಷಣಾ ಪಡೆಗಳಹಿರಿಯ ಅಧಿಕಾರಿಗಳು ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಚವ್ಹಾಣ್, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವರ್ಚುವಲ್‌ ಸಭೆ ಮೂಲಕ ರಾಜ್ಯದ ಕೋವಿಡ್ ಸ್ಥಿತಿಗತಿಯ ಪರಿಶೀಲನೆ ನಡೆಸಿದ್ದಾರೆ. ರಾಜ್ಯದ ಪ್ರಮುಖ ನಗರಗಳಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಹಾಯದೊಂದಿಗೆ ಸುಮಾರು 2,000 ಹಾಸಿಗೆಗಳನ್ನೊಳಗೊಂಡ ಆಸ್ಪತ್ರೆಗಳನ್ನು ತೆರೆಯಲು ಸರ್ಕಾರವು ಯೋಜಿಸಿದೆ.

ಭಾನುವಾರ ಮಧ್ಯಪ್ರದೇಶದಲ್ಲಿ12,248 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4,08,080ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.