ADVERTISEMENT

ಕೊಲ್ಲುವ ಉದ್ದೇಶದಿಂದಲೇ ಕಾರ್ಯಾಚರಣೆ: ನಾಗಾಲ್ಯಾಂಡ್ ಪೊಲೀಸರಿಂದ ಎಫ್‌ಐಆರ್

ನಾಗಾಲ್ಯಾಂಡ್‌: ಸೈನಿಕರ ವಿರುದ್ಧ ಪೊಲೀಸ್ ಎಫ್‌ಐಆರ್‌ನಲ್ಲಿ ಉಲ್ಲೇಖ l ಕೊಲೆ ಪ್ರಕರಣ ದಾಖಲು

ಪಿಟಿಐ
Published 6 ಡಿಸೆಂಬರ್ 2021, 23:01 IST
Last Updated 6 ಡಿಸೆಂಬರ್ 2021, 23:01 IST
ನಾಗರಿಕರನ್ನು ಸೈನಿಕರು ಗುಂಡಿಟ್ಟು ಕೊಂದಿದ್ದನ್ನು ಖಂಡಿಸಿ ಮೊನ್‌ನಲ್ಲಿ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು. ‘ಅಮಾಯಕ ನಾಗರಿಕರನ್ನು ಕೊಲ್ಲುವುದು ಭಯೋತ್ಪಾದನೆ’ ಎಂಬ ಬ್ಯಾನರ್‌ ಅನ್ನು ಪ್ರತಿಭಟನಕಾರರು ಪ್ರದರ್ಶಿಸಿದರು            –ಪಿಟಿಐ ಚಿತ್ರ
ನಾಗರಿಕರನ್ನು ಸೈನಿಕರು ಗುಂಡಿಟ್ಟು ಕೊಂದಿದ್ದನ್ನು ಖಂಡಿಸಿ ಮೊನ್‌ನಲ್ಲಿ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು. ‘ಅಮಾಯಕ ನಾಗರಿಕರನ್ನು ಕೊಲ್ಲುವುದು ಭಯೋತ್ಪಾದನೆ’ ಎಂಬ ಬ್ಯಾನರ್‌ ಅನ್ನು ಪ್ರತಿಭಟನಕಾರರು ಪ್ರದರ್ಶಿಸಿದರು –ಪಿಟಿಐ ಚಿತ್ರ   

ಕೊಹಿಮಾ: ‘ನಾಗರಿಕರನ್ನು ಕೊಲ್ಲುವ ಉದ್ದೇಶದಿಂದಲೇ ಸೈನಿಕರು ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ಸೇನೆಯ 21ನೇ ಪ್ಯಾರಾ ವಿಶೇಷ ಪಡೆಯ ವಿರುದ್ಧ ನಾಗಾಲ್ಯಾಂಡ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸೈನಿಕರ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಏಕ ಉದ್ದೇಶದಿಂದ ಸಂಘಟಿತ ಕೃತ್ಯ ಎಸಗಿದ ಆರೋಪಗಳ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.

ರಾಜ್ಯದ ಮೊನ್‌ ಜಿಲ್ಲೆಯ ಟಿರು ಮತ್ತು ಒಟಿಂಗ್‌ ಗ್ರಾಮಗಳ ಬಳಿ ಶನಿವಾರ ಸಂಜೆ ನಾಗರಿಕರ ಮೇಲೆ ಸೈನಿಕರು ಗುಂಡು ಹಾರಿಸಿ ಕೊಂದ ಕೃತ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಲ್ಲಿನ ಟಿಝಿಟ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತರಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

‘4ನೇ ಡಿಸೆಂಬರ್‌ನ ಮಧ್ಯಾಹ್ನ 3.30ರ ವೇಳೆಗೆ ಟಿರು ಗ್ರಾಮದ ಬಳಿ ಇದ್ದ ಕಲ್ಲಿದ್ದಲು ಗಣಿಯಿಂದ ಕೆಲಸ ಮುಗಿಸಿ ಒಟಿಂಗ್‌ ಗ್ರಾಮಕ್ಕೆ ನಾಗರಿಕರು ಬೊಲೆರೊ ಪಿಕ್‌ಅಪ್ ವಾಹನದಲ್ಲಿ ವಾಪಸಾಗುತ್ತಿದ್ದರು.
ಟಿರು ಮತ್ತು ಒಟಿಂಗ್‌ ಮಧ್ಯೆ ಇರುವಾಗ ಆ ಪಿಕ್‌ಅಪ್ ವಾಹನದ ಮೇಲೆ ಸೈನಿಕರು ಯಾವುದೇ ಕಾರಣ ಮತ್ತು ಪ್ರಚೋದನೆ ಇಲ್ಲದೆ ಗುಂಡು ಹಾರಿಸಿದ್ದಾರೆ. ಇದರಿಂದ ಒಟಿಂಗ್‌ನ ಹಲವು ಗ್ರಾಮಸ್ಥರು ಸತ್ತಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ADVERTISEMENT

‘ಘಟನೆ ನಡೆದ ಸಮಯದಲ್ಲಿ ಸಶಸ್ತ್ರ ಪಡೆಯ ಸೈನಿಕರು ಸ್ಥಳೀಯ ಪೊಲೀಸರ ಮಾರ್ಗದರ್ಶನ ಕೇಳಿರಲಿಲ್ಲ ಮತ್ತು ಮಾರ್ಗದರ್ಶನ ನೀಡಿ ಎಂದು ಪೊಲೀಸರಿಗೆ ಮನವಿಯನ್ನೂ ಸಲ್ಲಿಸಿರಲಿಲ್ಲ. ನಾಗರಿಕರನ್ನು ಕೊಲ್ಲುವ ಮತ್ತು ನಾಗರಿಕರನ್ನು ಗಾಯಗೊಳಿಸುವ ಉದ್ದೇಶದಿಂದಲೇ ಸೇನಾ ಪಡೆಯು ಪೊಲೀಸರ ಮಾರ್ಗದರ್ಶನ ಪಡೆದಿಲ್ಲ ಎಂಬುದು ಗೊತ್ತಾಗುತ್ತದೆ’ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ 302, 307 ಮತ್ತು 34ನೇ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಆರಂಭಿಸಲಾಗಿದೆ.

‘ಕೃತ್ಯ ಮರೆಮಾಚಲು ಯತ್ನ’

ಎಫ್‌ಐಆರ್ ದಾಖಲಿಸಿಕೊಂಡಿರುವ ಟಿಝಿಟ್ ಪೊಲೀಸರು ತನಿಖೆ ನಡೆಸಿ, ಪೂರ್ವಭಾವಿ ವರದಿಯನ್ನು ಸಿದ್ಧಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ವರದಿಯ ಪುಟಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

‘ಒಟಿಂಗ್ ಗ್ರಾಮಸ್ಥರು ಕಲ್ಲಿದ್ದಲು ಗಣಿಯಿಂದ ಮಹೀಂದ್ರಾ ಪಿಕ್‌ಅಪ್‌ನಲ್ಲಿ ವಾಪಸಾಗುತ್ತಿದ್ದರು. ಪಿಕ್‌ಅಪ್‌ನಲ್ಲಿ ಎಂಟು ಜನರಿದ್ದರು. ಅವರ ಮೇಲೆ ಸೈನಿಕರು ಗುಂಡು ಹಾರಿಸಿದ್ದಾರೆ. ಆಗ ಆರು ನಾಗರಿಕರು ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಟಿಂಗ್ ಗ್ರಾಮದಿಂದ ಕೆಲವೇ ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ.

‘ಗುಂಡಿನ ಸದ್ದು ಕೇಳಿದ ಒಟಿಂಗ್ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಅವರಿಗೆ ಮೊದಲು ಮಹೀಂದ್ರಾ ಪಿಕ್‌ಅಪ್ ಕಾಣಿಸಿದೆ. ಸಮೀಪದಲ್ಲೇ ಇದ್ದ ಟಾಟಾ ಮೊಬೈಲ್ ಪಿಕ್‌ಅಪ್‌ ವಾಹನಕ್ಕೆ, ಸೈನಿಕರು ಶವಗಳನ್ನು ತುಂಬಿಸುತ್ತಿರುವುದು ಅವರಿಗೆ ಕಾಣಿಸಿದೆ. ಶವಗಳನ್ನು ಟಾರ್ಪಲ್‌ ಮತ್ತು ಬ್ಯಾಗ್‌ಗಳ ಅಡಿಯಲ್ಲಿ ಮುಚ್ಚಿಡಲು ಸೈನಿಕರು ಯತ್ನಿಸಿದ್ದಾರೆ. ಶವಗಳನ್ನು ತಮ್ಮ ಶಿಬಿರಕ್ಕೆ ಕೊಂಡೊಯ್ದು, ಕೃತ್ಯವನ್ನು ಮರೆಮಾಚಲು ಸೈನಿಕರು ಹೀಗೆ ಮಾಡಿದ್ದಾರೆ. ಆಗ ಗ್ರಾಮಸ್ಥರು ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ. ಸೈನಿಕರು ಆಗ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ್ದರಿಂದ ಮತ್ತೆ ಏಳು ನಾಗರಿಕರು ಮೃತಪಟ್ಟಿದ್ದಾರೆ.

‘ಗಾಯಗೊಂಡಿದ್ದ ಇಬ್ಬರು ನಾಗರಿಕರನ್ನು ಎತ್ತಿಕೊಂಡು ಸೈನಿಕರು ಅಸ್ಸಾಂ ಗಡಿ ದಾಟಿದ್ದಾರೆ ಎಂಬುದನ್ನು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅವರಿಬ್ಬರಿಗೆ ಈಗ ದಿಬ್ರುಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪೂರ್ವಭಾವಿ ವರದಿಯಲ್ಲಿ ವಿವರಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಟಾಟಾ ಕ್ಸೆನಾನ್‌ ಪಿಕ್‌ಅಪ್‌ ಟ್ರಕ್‌ನಲ್ಲಿ ಶವಗಳನ್ನು ಟಾರ್ಪಲ್‌ನಿಂದ ಮುಚ್ಚಿಟ್ಟಿರುವ ದೃಶ್ಯಗಳಿರುವ ವಿಡಿಯೊ ಮತ್ತು ಚಿತ್ರಗಳು ವೈರಲ್ ಆಗಿವೆ.

- ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ತಲಾ ₹5 ಲಕ್ಷ ಪರಿಹಾರವನ್ನು ಘೋಷಿಸಿದೆ

- ನಾಗಾಲ್ಯಾಂಡ್‌ನ ಬುಡಕಟ್ಟು ಸಮುದಾಯಗಳು ಸೋಮವಾರ ಬಂದ್ ಆಚರಣೆಗೆ ಕರೆ ನೀಡಿದ್ದವು. ಬಂದ್ ಶಾಂತಿಯುತವಾಗಿ ನಡೆದಿದೆ

- ಸೈನಿಕರಿಂದ ನಾಗರಿಕರ ಹತ್ಯೆಯನ್ನು ಖಂಡಿಸಿ ಮಣಿಪುರ ಮತ್ತು ಅಸ್ಸಾಂನ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ

- ಸೈನಿಕರ ಗುಂಡಿಗೆ ಬಲಿಯಾದ ನಾಗರಿಕರ ಅಂತ್ಯ ಸಂಸ್ಕಾರವನ್ನು ಟಿರು ಸಮೀಪದ ಹೆಲಿಪ್ಯಾಡ್‌ನಲ್ಲಿ
ನಡೆಸಲಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ,
ನೂರಾರು ಜನರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು

- ಸೇನೆಗೆ ವಿಶೇಷಾಧಿಕಾರ ನೀಡುವ ಆಫ್‌ಸ್ಪ ಕಾಯ್ದೆಯನ್ನು ರದ್ದುಪಡಿಸಬೇಕು ಮತ್ತು ಕಾಯ್ದೆಯಿಂದ ತಮ್ಮ ರಾಜ್ಯವನ್ನು ಹೊರಗಿಡಬೇಕು ಎಂದು ಮಣಿಪುರ, ನಾಗಾಲ್ಯಾಂಡ್‌ ಜನರು ಒತ್ತಾಯಿಸಿದ್ದಾರೆ

- ನಾಗಾಲ್ಯಾಂಡ್‌ನಲ್ಲಿ ಸೋಮವಾರ ಹಾರ್ನ್‌ಬಿಲ್ ಉತ್ಸವವನ್ನು ಸ್ಥಗಿತಗೊಳಿಸಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.