ಗುವಾಹತಿ: ಅಸ್ಸಾಂ ಮುಖ್ಯಮಂತ್ರಿಗಳ ವಿಶೇಷ ಜಾಗೃತ ದಳವು, ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ನಾಗರಿಕ ಸೇವಾ ಅಧಿಕಾರಿ (ಎಸಿಎಸ್) ನೂಪುರ್ ಬೊರಾ ಅವರನ್ನು ಸೋಮವಾರ ಬಂಧಿಸಿದ್ದು, ಅವರ ನಿವಾಸದಿಂದ ₹92.50 ಲಕ್ಷ ನಗದು, ₹1.5 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದೆ.
‘ಈ ಅಧಿಕಾರಿಯು ತಮ್ಮ ಆದಾಯಕ್ಕಿಂತ 400 ಪಟ್ಟು ಹೆಚ್ಚಿನ ಆಸ್ತಿ ಗಳಿಸಿದ್ದಾರೆ. ಇವರನ್ನು ಕೆಲಸದಿಂದ ಅಮಾನತುಗೊಳಿಸುವುದು ಅಥವಾ ವಜಾಗೊಳಿಸಿದರಷ್ಟೇ ಸಾಕಾಗುವುದಿಲ್ಲ. ಇವರು ಮತ್ತು ಇವರಿಗೆ ಬೆಂಬಲ ನೀಡಿರುವವ ವಿರುದ್ಧ ಕಠಿಣ ಕಾನೂನು ಪ್ರಕ್ರಿಯೆ ನಡೆಯಲಿದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅಸ್ಸಾಂನ ಕಾಮ್‌ರೂಪ್ ಜಿಲ್ಲೆಯ ಗೊರೈಮರಿ ಪ್ರದೇಶದಲ್ಲಿ ವೃತ್ತ ಅಧಿಕಾರಿಯಾಗಿರುವ ನೂಪುರ್ ಬೊರಾ ಅವರ ಹೆಸರಿನಲ್ಲಿ 5 ಫ್ಲ್ಯಾಟ್‌ಗಳಿವೆ. ಭೂಮಿ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಅವರ ವಿರುದ್ಧ ದೂರು ಬಂದ ಬೆನ್ನಲ್ಲೇ, ಕಳೆದ 6 ತಿಂಗಳಿಂದ ಅವರ ಮೇಲೆ ನಿಗಾ ವಹಿಸಲಾಗಿತ್ತು. ಪ್ರಾಥಮಿಕ ತನಿಖೆಯ ನಂತರ ಅವರನ್ನು ಬಂಧಿಸಲಾಯಿತು‘ ಎಂದು ಮುಖ್ಯಮಂತ್ರಿಗಳ ವಿಶೇಷ ಜಾಗೃತ ದಳದ ಎಸ್ಪಿ ರೋಸಿ ಕಲೈಟಾ ತಿಳಿಸಿದ್ದಾರೆ.
‘ಭ್ರಷ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಮುಖ್ಯಮಂತ್ರಿಗಳ ವಿಶೇಷ ಜಾಗೃತ ದಳಕ್ಕೆ ದೂರು ನೀಡಬಹುದು’ ಎಂದು ಶರ್ಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.