ADVERTISEMENT

ಏಷ್ಯಾದ ಮೊದಲ ಮಹಿಳಾ ರೈಲು ಎಂಜಿನಿಯರ್‌ ಸುರೇಖಾ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 15:38 IST
Last Updated 19 ಸೆಪ್ಟೆಂಬರ್ 2025, 15:38 IST
ಹಜರತ್‌ ನಿಜಾಮುದ್ದೀನ್– ಎಸ್‌ಸಿಎಂಟಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಗುರುವಾರ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್‌ ತಲುಪುತ್ತಿದ್ದಂತೆಯೇ ರೈಲು ಚಾಲಕಿ ಸುರೇಖಾ ಅವರಿಗೆ ಅವರ ಸಹೋದ್ಯೋಗಿಗಳು, ಸಿಬ್ಬಂದಿ ಹಾಗೂ ಕುಟುಂಬಸ್ಥರು ಹಾರ ಹಾಕಿ ಸುರೇಖಾ ಅವರಿಗೆ ಪುಟ್ಟ ಬೀಳ್ಕೊಡುಗೆ ನೀಡಿದರು
ಹಜರತ್‌ ನಿಜಾಮುದ್ದೀನ್– ಎಸ್‌ಸಿಎಂಟಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಗುರುವಾರ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್‌ ತಲುಪುತ್ತಿದ್ದಂತೆಯೇ ರೈಲು ಚಾಲಕಿ ಸುರೇಖಾ ಅವರಿಗೆ ಅವರ ಸಹೋದ್ಯೋಗಿಗಳು, ಸಿಬ್ಬಂದಿ ಹಾಗೂ ಕುಟುಂಬಸ್ಥರು ಹಾರ ಹಾಕಿ ಸುರೇಖಾ ಅವರಿಗೆ ಪುಟ್ಟ ಬೀಳ್ಕೊಡುಗೆ ನೀಡಿದರು   

ಮುಂಬೈ: ಇದು ಮಹಿಳೆಯರ ಕೈಲಾಗುವಂಥ ಕೆಲಸವಲ್ಲ ಎನ್ನುತ್ತಿದ್ದ ಕಾಲದಲ್ಲಿಯೇ ರೈಲು ಎಂಜಿನಿಯರ್‌ ಆಗಿ ಉದ್ಯೋಗ ಪಡೆದವರು ಸುರೇಖಾ ಯಾದವ್‌. ಮಹಿಳೆಯೊಬ್ಬರು ರೈಲು ಚಲಾಯಿಸಿದ ಏಷ್ಯಾದ ಮೊದಲಿಗರಿವರು. 36 ವರ್ಷದ ವೃತ್ತಿ ಜೀವನ ಮುಗಿಸಿದ ಸುರೇಖಾ ಅವರು ಇದೇ 30ರಂದು ನಿವೃತ್ತಿಯಾಗಲಿದ್ದಾರೆ.

1988ರಲ್ಲಿ ಇವರು ರೈಲು ಎಂಜಿನಿಯರ್‌ ಆಗಿ ತಮ್ಮ ವೃತ್ತಿ ಆರಂಭಿಸಿದರು. ಗುರಿ ಸಾಧನೆ, ಹಿಡಿದ ಛಲ ಬಿಡದಿರುವುದು ಮತ್ತು ಅತ್ಯಂತ ಸವಾಲಿನ ವೃತ್ತಿರಂಗದಲ್ಲಿನ ಲಿಂಗ ತಾರತಮ್ಯದ ಅಡೆತಡೆಗಳನ್ನು ಮೀರಿದ ಇವರ ಜೀವನಗಾಥೆಯೇ ಅಸಾಧಾರಣವಾದುದು. ಅವರಿಗೀಗ 60 ವರ್ಷ.

ಗೂಡ್ಸ್‌ ರೈಲಿನ ಚಾಲಕಿಯಾಗಿ ಅವರು ತಮ್ಮ ವೃತ್ತಿ ಆರಂಭಿಸಿದರು. ಬಳಿಕ, ಮುಂಬೈನ ಲೋಕಲ್‌ ರೈಲುಗಳಲ್ಲಿ ಕಾರ್ಯನಿರ್ವಹಿಸಿದರು. ಪ್ರತಿಷ್ಠಿತ ‘ಡೆಕ್ಕನ್‌ ಕ್ವೀನ್‌’ನನ್ನೂ ಇವರು ಚಲಾಯಿಸಿದ್ದಾರೆ. ಆಧುನಿಕ ಕಾಲದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅನ್ನು ಚಲಾಯಿಸಿದ್ದಾರೆ. ವಿಶೇಷವೆಂದರೆ, ಇಷ್ಟೊಂದು ವೈವಿಧ್ಯಮಯ ರೈಲುಗಳನ್ನು ಚಲಾಯಿಸಿದ ಮೊದಲ ಮಹಿಳೆಯೂ ಇವರೇ ಆಗಿದ್ದಾರೆ.

ADVERTISEMENT

‘ಈ ವೃತ್ತಿ ಆಯ್ಕೆ ಮಾಡಿಕೊಳ್ಳಲು ಪೋಷಕರು ನನಗೆ ಬೇಡ ಎನ್ನಲೇ ಇಲ್ಲ’ ಎನ್ನುವ ಸುರೇಖಾ ಅವರು ಹುಟ್ಟಿದ್ದು ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ. ಹೈಸ್ಕೂಲ್‌ ಮುಗಿಸಿದ ಬಳಿಕ ಇವರು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿದರು. ಸುರೇಖಾ ಅವರ ಪತಿ ಪೊಲೀಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಇಬ್ಬರು ಮಕ್ಕಳು ಎಂಜಿನಿಯರ್‌ಗಳು.

ಸಾಧನೆಯ ಹಾದಿ

ಸುರೇಖಾ ಅವರಂತೂ ಹಲವು ಮೊದಲುಗಳಿಗೆ ಹೆಸರಾದವರು. 1989ರಲ್ಲಿ ಇವರ ಸಹಾಯಕ ಲೋಕೋ ಚಾಲಕಿಯಾದರು. 1996ರಲ್ಲಿ ಗೂಡ್ಸ್‌ ರೈಲು ಚಾಲಕಿಯಾದರು. 2000ರಲ್ಲಿ ರೈಲು ಚಾಲಕಿಯಾದರು. 2010ರಲ್ಲಿ ಘಾಟ್‌ ಡ್ರೈವರ್ ಆದರು. ಅತ್ಯಂತ ಸವಾಲಿನ ಇಳಿಜಾರಿನ ಘಾಟಿಗಳಲ್ಲಿ ರೈಲನ್ನು ಚಲಾಯಿಸುವವರಿಗೆ ಘಾಟ್‌ ಡ್ರೈವರ್‌ ಎನ್ನಲಾಗುತ್ತದೆ. 2023ರಲ್ಲಿ ವಂದೇ ಭಾರತ್‌ ಎಕ್ಸ್‌‍ಪ್ರೆಸ್‌ ಚಲಾಯಿಸಿದರು. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಸುರೇಖಾ ಅವರು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.

‘ಭಾರತೀಯ ರೈಲ್ವೆಯಲ್ಲಿ ಅಜರಾಮರ’

ತಮಗೆ ಎದುರಾದ ಎಲ್ಲ ಅಡೆತಡೆಗಳನ್ನು ದಾಟಿದವರು. ಅಸಂಖ್ಯ ಮಹಿಳೆಯರಿಗೆ ಸ್ಫೂರ್ತಿದಾಯಕರು. ಯಾವುದೇ ಕನಸನ್ನೂ ನನಸು ಮಾಡಿಕೊಳ್ಳುವುದು ಸಾಧ್ಯ ಎಂದು ತೋರಿಸಿಕೊಟ್ಟವರು. ಭಾರತೀಯ ರೈಲ್ವೆಯಲ್ಲಿ ಮಹಿಳಾ ಸಬಲೀಕರಣದ ರೂಪಕವಾಗಿ ಸುರೇಖಾ ಅವರ ವೃತ್ತಿ ಜೀವನವು ಅಜರಾಮರ ಕೇಂದ್ರ ರೈಲ್ವೆ ಮುಂಬೈ ಕೇಂದ್ರ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.