ADVERTISEMENT

ಸಚಿವರ ಮೇಲಿನ ಬಾಂಬ್‌ ದಾಳಿ ಹಿಂದೆ ರಾಜಕೀಯ ದ್ವೇಷವಿದೆ: ರೈಲ್ವೆ ಪೊಲೀಸರ ಸ್ಪಷ್ಟನೆ

ಪಿಟಿಐ
Published 19 ಫೆಬ್ರುವರಿ 2021, 5:47 IST
Last Updated 19 ಫೆಬ್ರುವರಿ 2021, 5:47 IST

ನವದೆಹಲಿ: ಬಾಂಬ್‌ ಸ್ಫೋಟದಲ್ಲಿ ತೀವ್ರ ಗಾಯಗೊಂಡಿರುವ ಪಶ್ಚಿಮ ಬಂಗಾಳದ ಸಚಿವ ಜಾಕೀರ್‌ ಹೊಸೈನ್‌ ಮೇಲೆ ನಡೆದ ದಾಳಿಯ ಹಿಂದೆ ರಾಜಕೀಯ ದ್ವೇಷ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ರೈಲ್ವೆ ಪೊಲೀಸ್‌ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಈ ಘಟನೆಯ ಹಿಂದಿರುವ ಕಾರಣ ಟಿಎಂಸಿ ಕಾರ್ಯಕರ್ತರ ನಡುವಿನ ಆಂತರಿಕ ರಾಜಕೀಯ ದ್ವೇಷ ಅಥವಾ ಆಡಳಿತ ಪಕ್ಷ ಟಿಎಂಸಿ ಮತ್ತು ಸಿಪಿಐ ನಡುವಿನ ರಾಜಕೀಯ ದ್ವೇಷವಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಟಿಎಂಸಿ ಕಾರ್ಯಕರ್ತರ ನಡುವೆ ಆಂತರಿಕ ಜಗಳಗಳು ಇರುವ ಬಗ್ಗೆ ವರದಿಗಳೂ ಇವೆ. 2017ರಲ್ಲಿ ಜೀವ ಬೆದರಿಕೆ ಹಾಕುತ್ತಿದ್ದರು ಎನ್ನುವ ಕಾರಣಕ್ಕೆ ಹೊಸೈನ್ ಅವರು ಇಬ್ಬರು ಟಿಎಂಸಿ ಪಕ್ಷದ ಸದಸ್ಯರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಿಸಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಜಾಕೀರ್‌ ಹೊಸೈನ್‌ ಅವರು ಕೋಲ್ಕತ್ತದ ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿತಾ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಸಂಜೆ ರೈಲಿಗಾಗಿ ಕಾಯುತ್ತಿರುವಾಗ ಅವರ ಮೇಲೆ ಕಚ್ಚಾ ಬಾಂಬ್‌ ಸ್ಫೋಟಸಲಾಗಿತ್ತು. ಸಚಿವರ ಜತೆಗೆ 25 ಮಂದಿ ಗಾಯಗೊಂಡಿದ್ದರು.

ಸಿಐಡಿಗೆ ಪ್ರಕರಣ

ಸಚಿವರ ಮೇಲಿನ ಬಾಂಬ್‌ ದಾಳಿ ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ಸಿಐಡಿಗೆ ವಹಿಸಿದೆ.

‘ಸಚಿವರ ಮೇಲೆ ಬುಧವಾರ ರಾತ್ರಿ ಕಚ್ಚಾ ಬಾಂಬ್ ದಾಳಿ ನಡೆದಿರುವುದರ ಹಿಂದೆ ಬಹುದೊಡ್ಡ ಪಿತೂರಿಯಿದೆ. ನನ್ನ ಸಚಿವ ಸಂಪುಟದ ಸದಸ್ಯರನ್ನು ಕೊಲ್ಲಲು ನಡೆದ ದೊಡ್ಡ ಪಿತೂರಿ ಇದಾಗಿತ್ತು. ಜಾಕೀರ್‌ ಅವರನ್ನು ಕೆಲವರು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಕೆಲವು ತಿಂಗಳುಗಳಿಂದ ಒತ್ತಡ ಹೇರುತ್ತಿದ್ದರು. ಈಗ ತನಿಖೆ ನಡೆಯುತ್ತಿದೆ, ತನಿಖೆ ಮುಗಿಯುವರೆಗೂ ಅದನ್ನು ಬಹಿರಂಗಪಡಿಸುವುದಿಲ್ಲ’ ಎಂದು ಮಮತಾ ಬ್ಯಾನರ್ಜಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.