ADVERTISEMENT

ಟಿಆರ್‌ಎಸ್‌ ಶಾಸಕರ ಖರೀದಿ ಯತ್ನ ಪ್ರಕರಣ: ಬಿ.ಎಲ್. ಸಂತೋಷ್‌ಗೆ ಸಮನ್ಸ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 21:05 IST
Last Updated 18 ನವೆಂಬರ್ 2022, 21:05 IST
ಬಿ.ಎಲ್.ಸಂತೋಷ್
ಬಿ.ಎಲ್.ಸಂತೋಷ್   

ಹೈದರಾಬಾದ್: ಟಿಆರ್‌ಎಸ್‌ನ ನಾಲ್ವರು ಶಾಸಕರನ್ನು ಖರೀದಿಸಲು ಪ್ರಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರಿಗೆ ಸಮನ್ಸ್ ನೀಡಿದ್ದಾರೆ.

ಬಿ.ಎಲ್.ಸಂತೋಷ್ ಅವರು ನ.21 ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು. ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದು ನೋಟಿಸ್‌ ನಲ್ಲಿ ತಿಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪೊಲೀಸರು ತನಿಖೆ ಮುಂದುವರಿಸಬಹುದು. ಆದರೆ, ನ್ಯಾಯಾಧೀಶರು ಅದನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಹೈಕೋರ್ಟ್ ತೀರ್ಪು ನೀಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ADVERTISEMENT

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶಾಸಕರಿಗೆ ಫಾರ್ಮ್‌ಹೌಸ್‌ನಲ್ಲಿ ₹ 100 ಕೋಟಿ ಆಮಿಷವೊಡ್ಡಿದ ಆರೋಪದ ಮೇಲೆ ಮೂವರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಅವರೆಲ್ಲಾ ಜಾಮೀನು ಪಡೆದಿದ್ದಾರೆ.

ಬಿಜೆಪಿಯು ಟಿಆರ್‌ಎಸ್‌ನ ನಾಲ್ವರು ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌, ಅದಕ್ಕೆ ಸಂಬಂಧಿಸಿದ ವಿಡಿಯೊವನ್ನು ನವೆಂಬರ್ ಮೊದಲ ವಾರ ಬಿಡುಗಡೆ ಮಾಡಿದ್ದರು.

‘ಪ್ರತಿಯೊಬ್ಬ ಶಾಸಕನಿಗೆ ₹ 50 ಕೋಟಿ ಖರ್ಚು ಮಾಡಲು ನಾವು ಸಿದ್ಧರಿದ್ದೇವೆ. ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಅವರು ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಸಭೆ ಏರ್ಪಡಿಸುತ್ತಾರೆ’ ಎಂಬ ಮಧ್ಯವರ್ತಿಗಳ ಮಾತನ್ನು ಉಲ್ಲೇಖಿಸಿ ಸಿ.ಎಂ ಕೆಸಿಆರ್‌ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.