ADVERTISEMENT

ಅತುಲ್ ಆತ್ಮಹತ್ಯೆ ಪ್ರಕರಣ: ಪತ್ನಿಯ ಚಿಕ್ಕಪ್ಪನಿಗೆ ಅಲಹಾಬಾದ್ ಹೈಕೋರ್ಟ್‌ ಜಾಮೀನು

ಪಿಟಿಐ
Published 17 ಡಿಸೆಂಬರ್ 2024, 2:32 IST
Last Updated 17 ಡಿಸೆಂಬರ್ 2024, 2:32 IST
ಅಲಹಾಬಾದ್ ಹೈಕೋರ್ಟ್‌
ಅಲಹಾಬಾದ್ ಹೈಕೋರ್ಟ್‌   

ಪ್ರಯಾಗರಾಜ್: ಸಾಫ್ಟ್‌ವೇರ್ ಎಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಅವರ ಪತ್ನಿ ನಿಖಿತಾ ಸಿಂಘಾನಿಯಾ ಅವರ ಚಿಕ್ಕಪ್ಪ ಸುಶೀಲ್ ಸಿಂಘಾನಿಯಾಗೆ ಅಲಹಾಬಾದ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ ಹಾಗೂ ಸಹೋದರ ಅನುರಾಗ್​ ಸಿಂಘಾನಿಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕುರಿತು ನ್ಯಾಯಮೂರ್ತಿ ಅಶುತೋಷ್ ಶ್ರೀವಾಸ್ತವ ಅವರು ವಿಚಾರಣೆ ನಡೆಸಿದ್ದಾರೆ.

ಕೋರ್ಟ್‌ನಲ್ಲಿ ಸುಶೀಲ್ ಸಿಂಘಾನಿಯಾ ಪರ ಹಿರಿಯ ವಕೀಲ ಮನೀಶ್ ತಿವಾರಿ ವಾದ ಮಂಡಿಸಿದ್ದಾರೆ. ಸುಶೀಲ್ ಸಿಂಘಾನಿಯಾ ಅವರಿಗೆ 69 ವರ್ಷ ವಯಸ್ಸಾಗಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಅತುಲ್ ಆತ್ಮಹತ್ಯೆಗೆ ಸುಶೀಲ್ ಪ್ರಚೋದನೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.

ADVERTISEMENT

ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸುಶೀಲ್ ಸಿಂಘಾನಿಯಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.

ಅತುಲ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪತ್ನಿ ನಿಖಿತಾ ಸಿಂಘಾನಿಯಾ ಅವರನ್ನು ಹರಿಯಾಣದ ಗುರುಗ್ರಾಮದ ಪಿ.ಜಿಯಲ್ಲಿ ಬಂಧಿಸಿದರೆ, ತಾಯಿ ನಿಶಾ ಸಿಂಘಾನಿಯಾ ಹಾಗೂ ಸಹೋದರ ಅನುರಾಗ್​ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ರಾಮೇಶ್ವರ ಹೋಟೆಲ್ ಬಳಿ ಬಂಧಿಸಿಲಾಯಿತು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳನ್ನು ಭಾನುವಾರ ಬೆಂಗಳೂರಿಗೆ ಕರೆತರಲಾಗಿದ್ದು, ಸ್ಥಳೀಯ ನ್ಯಾಯಾಧೀಶರ ಎದುರು ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಖಾಸಗಿ ಕಂಪನಿಯ ನಿರ್ದೇಶಕ, ಉತ್ತರ ಪ್ರದೇಶದ ಅತುಲ್ ಸುಭಾಷ್ ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದರು.

ಸಹೋದರ ಬಿಕಾಸ್ ಕುಮಾರ್ ಅವರು ನೀಡಿದ ದೂರು ಆಧರಿಸಿ ಅತುಲ್ ಸುಭಾಷ್‌ ಅವರ ಪತ್ನಿ, ಆಕೆಯ ತಾಯಿ, ಸಹೋದರ ಹಾಗೂ ಚಿಕ್ಪಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆತ್ಮಹತ್ಯೆಗೂ ಮುನ್ನ ಅತುಲ್ ಸುಭಾಷ್ 90 ನಿಮಿಷಗಳ ವಿಡಿಯೊ ಮಾಡಿದ್ದರು. 'ಭಾರತದಲ್ಲಿ ನರಮೇಧ ನಡೆಯುತ್ತಿದೆ. ಜನರನ್ನು ರಕ್ಷಿಸಿ ವಾಕ್ ಸ್ವಾತಂತ್ರ್ಯ ಮರುಸ್ಥಾಪಿಸಿ' ಎಂದು ಮನವಿ ಮಾಡಿದ್ದರಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಟೆಸ್ಲಾ ಕಂಪನಿ ಸಿಇಒ ಇಲಾನ್ ಮಸ್ಕ್​ ಅವರ ನೆರವನ್ನು ಕೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.