ADVERTISEMENT

ಸನ್ನಿ ದೇವಲ್ ಮನೆ ಹರಾಜು ನೋಟಿಸ್ ಹಿಂಪಡೆದಿದ್ದೇಕೆ? ಜೈರಾಮ್ ರಮೇಶ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2023, 10:02 IST
Last Updated 21 ಆಗಸ್ಟ್ 2023, 10:02 IST
ಸನ್ನಿ ದೇವಲ್, ಜೈರಾಮ್ ರಮೇಶ್
ಸನ್ನಿ ದೇವಲ್, ಜೈರಾಮ್ ರಮೇಶ್   

ಮುಂಬೈ: ಸಾಲದ ಮೊತ್ತವನ್ನು ಅವಧಿಯೊಳಗೆ ತೀರಿಸದ ಬಿಜೆಪಿ ಸಂಸದ ಹಾಗೂ ನಟ ಅಜಯ್ ಸಿಂಗ್ ದೇವಲ್ ಅಲಿಯಾಸ್ ಸನ್ನಿ ದೇವಲ್ ಮನೆ ಹರಾಜಿಗಿಟ್ಟಿದ್ದ ಬ್ಯಾಂಕ್ ಆಫ್ ಬರೋಡಾ, 24 ಗಂಟೆಗಳ ಅವಧಿಯೊಳಗಾಗಿ ತನ್ನ ನಿರ್ಧಾರವನ್ನು ಹಿಂಪಡೆದಿರುವುದು ಚರ್ಚೆಗೆ ಕಾರಣವಾಗಿದೆ.

2022ರಿಂದ ಬಾಕಿ ಉಳಿಸಿಕೊಂಡಿದ್ದ ₹56 ಕೋಟಿ ಸಾಲದ ಮೊತ್ತ ವಸೂಲಿಗೆ ಸಂಬಂಧಿಸಿದಂತೆ ಗುರುದಾಸ್‌ಪುರದ ಸಂಸದ ಸನ್ನಿ ದೇವಲ್‌ಗೆ ಸೇರಿದ ಮನೆಯನ್ನು ಬ್ಯಾಂಕ್ ಆಫ್ ಬರೋಡಾ ಇ–ಹರಾಜಿಗೆ ಇಟ್ಟಿತ್ತು. ಇದನ್ನು ಆಗಸ್ಟ್‌ 25ರಂದು ನಡೆಸುವುದಾಗಿಯೂ ಹೇಳಿತ್ತು.

ಮುಂಬೈನ ಜುಹುನಲ್ಲಿರುವ ಅವರ ಸನ್ನಿ ವಿಲ್ಲಾದ ಮೂಲ ಬೆಲೆಯನ್ನು ₹51.43 ಕೋಟಿಗೆ ನಿಗದಿಪಡಿಸಿದ್ದ ಬ್ಯಾಂಕ್‌, ಕನಿಷ್ಠ ಬಿಡ್ ಮೊತ್ತವಾಗಿ ₹5.14 ಕೋಟಿ ನಿಗದಿಪಡಿಸಿತ್ತು. ಆದರೆ ಜಾರಿ ಮಾಡಿದ ನೋಟಿಸ್‌ಗೆ ಸ್ಪಷ್ಟನೆ ನೀಡಿರುವ ಬ್ಯಾಂಕ್ ಆಫ್ ಬರೋಡಾ, ತಾಂತ್ರಿಕ ಕಾರಣಗಳಿಂದಾಗಿ ಹರಾಜು ನೋಟಿಸ್ ಹಿಂಪಡೆದಿರುವುದಾಗಿ ಹೇಳಿದೆ.

ADVERTISEMENT

1966 ಚದರಡಿಯ ಸನ್ನಿ ವಿಲ್ಲಾ ಹಾಗೂ ಸನ್ನಿ ಸೌಂಡ್ಸ್‌ ಹರಾಜು ಪಟ್ಟಿಯಲ್ಲಿತ್ತು. ಇದರ ಮೇಲೆ ಪಡೆದ ಸಾಲಕ್ಕೆ ಸನ್ನಿ ಅವರ ತಂದೆ ಹಿರಿಯ ನಟ ಧರ್ಮೇಂದ್ರ ಜಾಮೀನುದಾರರಾಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬ್ಯಾಂಕ್‌ನ ಈ ಕ್ರಮವನ್ನು ಕಾಂಗ್ರೆಸ್‌ನ ಜೈರಾಮ್ ರಮೇಶ್ ಅವರು ತಮ್ಮ ‘ಎಕ್ಸ್‌’ (ಟ್ವಿಟರ್‌) ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ‘ಬಿಜೆಪಿ ಸಂಸದ ಸನ್ನಿ ದೇವಲ್ ಅವರ ಮನೆ ಹರಾಜಿಗೆ ಇಡಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿತ್ತು. ಆದರೆ 24 ಗಂಟೆಯೊಳಗಾಗಿ ಅದು ತನ್ನ ನಿರ್ಧಾರದಿಂದ ಹಿಂದೆ ಸರಿದು ‘ತಾಂತ್ರಿಕ ಕಾರಣ’ ಎಂದಿರುವುದು ಅಚ್ಚರಿ ತಂದಿದೆ. ಹಾಗಿದ್ದರೆ ಈ ‘ತಾಂತ್ರಿಕ ಕಾರಣ’ ತಂದವರು ಯಾರು?’ ಎಂದು ಪ್ರಶ್ನಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.