ADVERTISEMENT

ಗುಪ್ಕಾರ್‌ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂಗಳಿಗೆ ನಿರ್ಬಂಧ: ಗೃಹ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 16:43 IST
Last Updated 1 ಜನವರಿ 2022, 16:43 IST
ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಮತ್ತು ಫಾರೂಕ್ ಅಬ್ದುಲ್ಲಾ (ಪಿಟಿಐ ಸಂಗ್ರಹ ಚಿತ್ರ)
ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಮತ್ತು ಫಾರೂಕ್ ಅಬ್ದುಲ್ಲಾ (ಪಿಟಿಐ ಸಂಗ್ರಹ ಚಿತ್ರ)   

ಶ್ರೀನಗರ: ಜಮ್ಮು ಪ್ರಾಂತ್ಯಕ್ಕೆ ಹೆಚ್ಚುವರಿಯಾಗಿ 6 ವಿಧಾನಸಭಾ ಕ್ಷೇತ್ರಗಳನ್ನು ಸೇರ್ಪಡೆ ಮಾಡುವ ಕ್ಷೇತ್ರ ಪುನರ್‌ವಿಂಗಡಣಾ ಆಯೋಗದ ಕರಡು ಪ್ರಸ್ತಾವ ವಿರೋಧಿಸಿ ಗುಪ್ಕಾರ್‌ ಒಕ್ಕೂಟ (ಪಿಎಜಿಡಿ) ನೇತೃತ್ವದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಮ್ಮು ಮತ್ತು ಕಾಶ್ಮೀರ ಮೂವರು ಮಾಜಿ ಮುಖ್ಯಮಂತ್ರಿಗಳಿಗೆ ಇಲ್ಲಿನ ಆಡಳಿತ ಅವಕಾಶ ನೀಡಲಿಲ್ಲ.

ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಅವರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಿ ಮೂವರ ನಿವಾಸಗಳ ಪ್ರವೇಶದ್ವಾರದ ಗೇಟ್‌ಗಳಿಗೆ ಬೀಗ ಹಾಕಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೂವರು ಮಾಜಿ ಸಿಎಂಗಳ ನಿವಾಸಗಳಿರುವ ಇಲ್ಲಿನ ಗುಪ್ಕಾರ್‌ ರಸ್ತೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಈ ಮೂವರು ರಾಜಕೀಯ ನಾಯಕರಿಗೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಎರಡನೇ ಹಂತದ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

‘ಹೊಸ ವರ್ಷದ ದಿನದಂದೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಲ್ಲಿನ ಜನರನ್ನು ಕಾನೂನುಬಾಹಿರವಾಗಿ ಅವರ ಮನೆಗಳಲ್ಲೇ ಇರಿಸಿ ಬೀಗ ಹಾಕುತ್ತಿದ್ದಾರೆ. ಪ್ರಜಾಸತ್ತಾತ್ಮಕ ಚಟುವಟಿಕೆಗಳೆಂದರೆ ಇಲ್ಲಿನ ಆಡಳಿತಕ್ಕೆ ಭಯವಿದೆ. ಶಾಂತಿಯುತವಾಗಿ ನಡೆಯುವ ಗುಪ್ಕಾರ್‌ ಒಕ್ಕೂಟದ ಪ್ರತಿಭಟನೆಯನ್ನು ತಡೆಯಲು ತಮ್ಮ ನಿವಾಸದ ಹೊರಗೆ ಟ್ರಕ್‌ಗಳನ್ನು ನಿಯೋಜಿಸಿದ್ದಾರೆ’ ಎಂದು ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ಟ್ವೀಟ್‌ ಮಾಡಿದ್ದಾರೆ.

‘ನಮ್ಮ ಪ್ರತಿಭಟನೆಯನ್ನು ಹಾಳುಮಾಡಬೇಕೆಂಬ ಕೆಟ್ಟ ಉದ್ದೇಶ ಇಲ್ಲಿನ ಆಡಳಿತಕ್ಕೆ ಇದ್ದರೂ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಹಾಗೂ ಪಿಡಿಪಿ ಪಕ್ಷದ ಕಾರ್ಯಕರ್ತರು ಶ್ರೀನಗರದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸಂವಿಧಾನ 370ನೇ ವಿಧಿ ರದ್ದುಗೊಳಿಸಿರುವ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರ ಧೈರ್ಯ ಹಾಗೂ ದೃಢಸಂಕಲ್ಪಕ್ಕೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.