ADVERTISEMENT

ಅಯೋಧ್ಯೆ ತೀರ್ಪು | ಸ್ಕಂದ ಪುರಾಣವೇ ಸಾಕ್ಷ್ಯ...

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:14 IST
Last Updated 9 ನವೆಂಬರ್ 2019, 19:14 IST
   

ಬೆಂಗಳೂರು: ವಿವಾದಿತ ಜಾಗವೇ ರಾಮಜನ್ಮಸ್ಥಳ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಹಿತ್ಯ ಪಠ್ಯಗಳು, ಬ್ರಿಟಿಷ್ ಮತ್ತು ಭಾರತ ಸರ್ಕಾರದ ಗೆಜೆಟ್‌ಗಳು ಮತ್ತು ಮೌಖಿಕ ಸಾಕ್ಷ್ಯಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.

‘ಹಿಂದೂಗಳ ನಂಬಿಕೆಯ ಪ್ರಕಾರ, ವಿವಾದಿತ ಸ್ಥಳವು ರಾಮನ ಜನ್ಮಸ್ಥಾನವಾಗಿತ್ತೇ’ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಈ ಅಂಶವನ್ನು ಸುಪ‍್ರೀಂ ಕೋರ್ಟ್‌ ವಿವರಿಸಿದೆ.

ರಾಮಾಯಣದ ಮೂಲ ಕೃತಿ ‘ವಾಲ್ಮೀಕಿ ರಾಮಾಯಣ’ವು ಅಯೋಧ್ಯೆಯು ರಾಮನ ಜನ್ಮಭೂಮಿ ಎಂದಷ್ಟೇ ಹೇಳುತ್ತದೆ. ಆದರೆ ಇದೇ ರಾಮನ ಜನ್ಮಸ್ಥಾನ ಎಂದು ನಿಖರವಾಗಿ ಯಾವ ಸ್ಥಳವನ್ನೂ ಗುರುತಿಸುವುದಿಲ್ಲ. ಆದರೆ ಸ್ಕಂದ ಪುರಾಣವು ರಾಮ ಜನ್ಮಸ್ಥಾನವನ್ನು ಗುರುತಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ADVERTISEMENT

‘ಸ್ಕಂದ ಪುರಾಣದ, ವೈಷ್ಣವಕಾಂಡದ ಅಯೋಧ್ಯಾ ಮಹಾತ್ಮ ಅಧ್ಯಾಯದಲ್ಲಿ ರಾಮನ ಜನ್ಮಸ್ಥಾನವನ್ನು ಗುರುತಿಸಲಾಗಿದೆ. ಈ ಅಧ್ಯಾಯದ ಶ್ಲೋಕವು ಈ ಮುಂದಿನಂತಿದೆ.‘ಇಲ್ಲಿಂದ ಈಶಾನ್ಯ ದಿಕ್ಕಿನಲ್ಲಿರುವ ಜಾಗವೇ ರಾಮಜನ್ಮ
ಸ್ಥಾನ. ಮೋಕ್ಷ ಸ್ಥಾನವಾಗಿರುವ ಈ ಸ್ಥಳವು ವಿಘ್ನೇಶ್ವರದ ಪೂರ್ವ ದಿಕ್ಕಿನಲ್ಲಿದೆ, ವಶಿಷ್ಠದ ಉತ್ತರ ದಿಕ್ಕಿನಲ್ಲಿದೆ, ಲಾವ್ಮಾಸಾ ಆಶ್ರಮದ ಪಶ್ಚಿಮ ದಿಕ್ಕಿನಲ್ಲಿದೆ’ ಎಂದು ಶ್ಲೋಕವು ಹೇಳುತ್ತದೆ.

ಈ ಶ್ಲೋಕವನ್ನು ಆಧಾರವಾಗಿ ಇಟ್ಟುಕೊಂಡು, ಅದರಲ್ಲಿನ ವಿವರಗಳನ್ನು ಸುಪ್ರೀಂ ಕೋರ್ಟ್‌ ಪರಿಶೀಲಿಸಿದೆ. ಈ ಶ್ಲೋಕದಲ್ಲಿರುವ ಸ್ಥಳಗಳು ಇವೆಯೇ ಎಂಬುದನ್ನು ಮೌಖಿಕ ಸಾಕ್ಷ್ಯಗಳ ಮೂಲಕ ಕಂಡುಕೊಳ್ಳಲಾಗಿದೆ.

‘ಈ ಎಲ್ಲಾ ಸ್ಥಳಗಳು ಶ್ಲೋಕ ಉಲ್ಲೇಖಿಸಿರುವ ಜಾಗದಲ್ಲಿಯೇ ಇವೆ. ಶ್ಲೋಕದಲ್ಲಿ ಉಲ್ಲೇಖಿಸಿರುವ ದಿಕ್ಕಿನಲ್ಲಿಯೇ ರಾಮಮಂದಿರವಿದೆ. ಈಗಲೂ ಈ ಸ್ಥಳಗಳು ಇವೆ. ನಾವು ಹಲವು ಭಾರಿ ಈ ಸ್ಥಳಗಳ ದರ್ಶನ ಪಡೆದಿದ್ದೇವೆ ಎಂದು ಹಲವರು ಮೌಖಿಕ ಸಾಕ್ಷ್ಯ ನುಡಿದಿದ್ದಾರೆ.ಬ್ರಿಟಿಷರ ಆಳ್ವಿಕೆಯಲ್ಲೇ ಈ ಸ್ಥಳಗಳನ್ನು ಗುರುತಿಸುವ ಸಲುವಾಗಿ ಕಲ್ಲಿನ ನಾಮಫಲಕ ಹಾಕಲಾಗಿತ್ತು. ಅಲ್ಲದೆ ಗೆಜೆಟ್‌ಗಳಲ್ಲಿ ವಿವಾದಿತ ಸ್ಥಳವನ್ನು, ‘ರಾಮ ಜನ್ಮಸ್ಥಾನದಲ್ಲಿರುವ ಬಾಬರಿ ಮಸೀದಿ’ ಎಂದು ಉಲ್ಲೇಖಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಹೀಗಾಗಿ ರಾಮಜನ್ಮ ಭೂಮಿಯ ಮೇಲೆ ಮಸೀದಿ ಕಟ್ಟಲಾಗಿದೆ ಎಂಬುದನ್ನು ಸಾಹಿತ್ಯಿಕ ಮತ್ತು ಮೌಖಿಕ ಸಾಕ್ಷ್ಯಗಳು ಸಾಬೀತುಮಾಡಿವೆ. ಇಲ್ಲಿ ಮಸೀದಿ ನಿರ್ಮಿಸುವುದಕ್ಕೂ ಮುನ್ನವೇ ಹಿಂದೂಗಳು ಇದನ್ನು ರಾಮ ಜನ್ಮಭೂಮಿ ಎಂದು ಆರಾಧಿಸುತ್ತಿದ್ದರು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅಯೋಧ್ಯೆಯ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬುದನ್ನು ತೀರ್ಮಾನಿಸಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಎದುರಿದ್ದ ಪ್ರಶ್ನೆಗಳು ಇವು:

* ಹಿಂದೂಗಳು ನಂಬಿರುವಂತೆ, ವಿವಾದಿತ ಸ್ಥಳವು ಶ್ರೀರಾಮನ ಜನ್ಮಸ್ಥಾನವೇ?

* ಅಲ್ಲಿ ಮೂರ್ತಿಗಳು ಇರುವ ದೇವಸ್ಥಾನ ಇತ್ತೇ?

* ವಿವಾದಿತ ಜಾಗದಲ್ಲಿ ಇದ್ದ ಕಟ್ಟಡವು ಬಾಬರ್‌ ನಿರ್ಮಿಸಿದ್ದು ಎನ್ನಲಾದ ಬಾಬರಿ ಮಸೀದಿಯೇ?

* ಅದನ್ನು ನಿರ್ಮಾಣ ಮಾಡಿದ್ದು ಯಾವಾಗ? ಯಾರು ನಿರ್ಮಾಣ ಮಾಡಿದ್ದು? ಬಾಬರ್‌ ನಿರ್ಮಿಸಿದ್ದೋ ಮೀರ್‌ ಬಕಿ ನಿರ್ಮಿಸಿದ್ದೋ?

* ಆ ಕಟ್ಟಡವನ್ನು ಹಿಂದೂ ದೇವಸ್ಥಾನವನ್ನು ಧ್ವಂಸಗೊಳಿಸಿ, ಅದೇ ಜಾಗದಲ್ಲಿ ನಿರ್ಮಾಣ ಮಾಡಲಾಯಿತೇ?

* ಆ ಜಾಗವನ್ನು ಹಿಂದೂಗಳು ರಾಮನ ಜನ್ಮಭೂಮಿ ಎಂಬ ಭಾವನೆಯಿಂದ ಪೂಜಿಸುತ್ತ ಇದ್ದಾರೆಯೇ? ಪುರಾತನ ಕಾಲದಿಂದಲೂ ಆ ಸ್ಥಳಕ್ಕೆ ಯಾತ್ರಾರ್ಥಿಗಳಾಗಿ ಹೋಗುತ್ತಿದ್ದಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.