ADVERTISEMENT

‘ಬಾಬರಿ ಮಸೀದಿ ಧ್ವಂಸ ಭಾರತದ ಜಾತ್ಯತೀತ ವ್ಯವಸ್ಥೆ ನಾಶಪಡಿಸುವ ಪ್ರಯತ್ನ’

ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 14:39 IST
Last Updated 6 ಡಿಸೆಂಬರ್ 2021, 14:39 IST
ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿ –ಪಿಟಿಐ ಸಂಗ್ರಹ ಚಿತ್ರ 
ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿ –ಪಿಟಿಐ ಸಂಗ್ರಹ ಚಿತ್ರ    

ಕೋಲ್ಕತ್ತ: ‘1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಪ್ರಕರಣವು ಭಾರತದ ಜಾತ್ಯತೀತ ವ್ಯವಸ್ಥೆಯನ್ನು ನಾಶಪಡಿಸುವ ಘೋರ ಪ್ರಯತ್ನವಾಗಿದೆ’ ಎಂದು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಹೇಳಿದ್ದಾರೆ.

ಸೋಮವಾರ ಕೋಲ್ಕತ್ತಾದಲ್ಲಿ ಎಡಪಂಥೀಯ ವಿದ್ಯಾರ್ಥಿಗಳ ಸಂಘಟನೆ ಎಸ್‌ಎಫ್ಐ ಆಯೋಜಿಸಿದ್ದ ‘ಸ್ವಾತಂತ್ರ್ಯ 75: ಸಾಮಾಜಿಕ ನ್ಯಾಯ ಮತ್ತು ಭಾರತದ ಕಲ್ಪನೆ ಕುರಿತು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, '1992ರಲ್ಲಿ ಬಿಜೆಪಿಯ ಹಿರಿಯ ನಾಯಕರು ಸಂವಿಧಾನದ ಮೂಲಕ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಮತ್ತು ನಂಬಿಕೆಗೆ ಪ್ರಸ್ತುತತೆ ಇರಬೇಕು ಎಂದು ಪ್ರಚಾರ ಮಾಡಿದ ಕಲ್ಪನೆ 2020ರಲ್ಲಿ ನಿಜವಾಗಿದೆ’ ಎಂದರು.

‘ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದವು ಮೂಲತಃ ಎರಡು ಗುಂಪುಗಳ ನಡುವಿನ ದಾವೆಯಾಗಿದೆ.ಯಾವುದೇ ಸಿವಿಲ್ ದಾವೆಯಲ್ಲಿ ಶೀರ್ಷಿಕೆ ಪತ್ರಗಳು, ಆಸ್ತಿಯ ದಾಖಲೆಗಳನ್ನು ವಿಶ್ಲೇಷಿಸಲಾಗುತ್ತದೆ. ಭಾರತದಲ್ಲಿ ಹಕ್ಕುಪತ್ರಗಳಿಗೆ ನಂಬಿಕೆಯ ಮೇಲೆ ಚಾಲನೆ ನೀಡಿದ ಏಕೈಕ ಪ್ರಕರಣ ಇದಾಗಿದೆ. 1992ರಲ್ಲಿ ವಿಧ್ವಂಸಕ ಘಟನೆ ನಡೆದಾಗ, ಸಂವಿಧಾನದಿಂದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಮತ್ತು ನಂಬಿಕೆಗೆ ಪ್ರಸ್ತುತತೆ ಇರಬೇಕು ಎಂಬ ಮಾತುಗಳು ಎಲ್‌.ಕೆ. ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಿಂದ ಕೇಳಿಬಂದವು. ಆದ್ದರಿಂದ ಅವರು 1992ರಲ್ಲಿ ಹೇಳಿದ್ದು 2020ರಲ್ಲಿ ನಿಜವಾಯಿತು’ ಎಂದು ಅವರು ಹೇಳಿದರು.

ADVERTISEMENT

‘1992ರಲ್ಲಿ, ಗಣತಂತ್ರ ವ್ಯವಸ್ಥೆಯಲ್ಲಿ ಜಾತ್ಯತೀತ ರಚನೆಯನ್ನು ನಾಶಮಾಡಲು ಒಂದು ಗುಂಪು ಭಾರಿ ಪ್ರಯತ್ನ ಮಾಡಿತು. ಜಾತ್ಯತೀತ ರಚನೆಯನ್ನು ಮೊದಲ ಬಾರಿಗೆ ಪರೀಕ್ಷೆಗೊಳಪಡಿಸಲಾಯಿತು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.