ADVERTISEMENT

ಆಜಂ ಖಾನ್‌ಗೆ ಜಾಮೀನು: ನಿಲುವು ತಿಳಿಸುವಂತೆ ಯುಪಿ ಸರ್ಕಾರಕ್ಕೆ ‘ಸುಪ್ರೀಂ’ ಸೂಚನೆ

ಪಿಟಿಐ
Published 11 ಮೇ 2022, 11:03 IST
Last Updated 11 ಮೇ 2022, 11:03 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಭೂಕಬಳಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ತನ್ನ ನಿಲುವು ತಿಳಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್‌, ಬಿ.ಆರ್‌. ಗವಾಯಿ ಹಾಗೂ ಎ.ಎಸ್‌. ಬೋಪಣ್ಣ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ನಿರ್ದೇಶನ ನೀಡಿದ್ದು, ಮಂಗಳವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

‘ಆಜಂ ಖಾನ್‌ ಅವರು ಎರಡು ವರ್ಷಗಳಿಂದ ಕಾರಾಗೃಹದಲ್ಲೇ ಇದ್ದಾರೆ. ಅವರನ್ನು ಯಾಕೆ ಬಿಡುತ್ತಿಲ್ಲ, ಒಂದು ಅಥವಾ ಎರಡು ಪ್ರಕರಣಗಳಾದರೆ ಸರಿ. ಅವರ ವಿರುದ್ಧ 89 ಪ್ರಕರಣಗಳಿವೆ. ಹೀಗೆ ಆಗಲು ಸಾಧ್ಯವಿಲ್ಲ. ಅವರಿಗೆ ಜಾಮೀನು ದೊರೆತರೂ, ಬೇರೆ ಯಾವುದಾದರೊಂದು ಪ್ರಕರಣದಲ್ಲಿ ಕಾರಾಗೃಹಕ್ಕೆ ಕಳಿಸಲಾಗುತ್ತದೆ. ಸರ್ಕಾರ ಇದಕ್ಕೆ ಉತ್ತರ ನೀಡಬೇಕು’ ಎಂದು ಪೀಠ ಸೂಚಿಸಿತು.

ADVERTISEMENT

ಆಜಂ ಖಾನ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ಇದೊಂದು ಕಳವಳಕಾರಿ ಪ್ರಕರಣವಾಗಿದ್ದು, ಆಳವಾದ ವಿಚಾರಣೆಯ ಅಗತ್ಯವಿದೆ’ ಎಂದು ಹೇಳಿದರು.‌

‘ಆಜಂ ಖಾನ್‌ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಎಲ್ಲ ಪ್ರಕರಣಗಳಲ್ಲೂ ಹುರುಳಿದೆ’ ಎಂದು ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.