ADVERTISEMENT

ಇಪಿಎಫ್‌ಒ ಯೋಜನೆಯ ವೇತನ ಮಿತಿ ಪರಿಷ್ಕರಣೆ ಪರಿಶೀಲಿಸಿ: ಸುಪ್ರೀಂ ಕೋರ್ಟ್‌

ಪಿಟಿಐ
Published 5 ಜನವರಿ 2026, 16:16 IST
Last Updated 5 ಜನವರಿ 2026, 16:16 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸುಮಾರು 11 ವರ್ಷಗಳಿಂದ ಪರಿಷ್ಕರಣೆ ಆಗದ ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಯೋಜನೆಯ ವೇತನ ಮಿತಿಯನ್ನು ಪರಿಷ್ಕರಿಸುವ ಕುರಿತು ನಾಲ್ಕು ತಿಂಗಳಲ್ಲಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯವನ್ನು ಉದ್ಯೋಗಿಗಳಿಗೆ ನೀಡಲು ನೌಕರರ ಭವಿಷ್ಯ ನಿಧಿ ಸಂಘಟನೆಯು ಪ್ರಸ್ತುತ ತಿಂಗಳಿಗೆ ₹15,000 ವೇತನ ಮಿತಿ ನಿಗದಿಮಾಡಿದೆ. ಅದಕ್ಕೂ ಹೆಚ್ಚಿನ ವೇತನ ಹೊಂದಿರುವವರನ್ನು ಅದು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆಪಾದಿಸಿ ನವೀನ್‌ ಪ್ರಕಾಶ್‌ ನೌಟಿಯಾಲ್‌ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ.ಕೆ. ಮಾಹೇಶ್ವರಿ ಮತ್ತು ಎ.ಎಸ್‌.ಚಂದೂರ್ಕರ್‌ ಅವರ ಪೀಠ ನಡೆಸಿ, ಆದೇಶ ನೀಡಿದೆ.

ADVERTISEMENT

‘ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಕನಿಷ್ಠ ವೇತನವು ತಿಂಗಳಿಗೆ ₹15,000 ದಾಟಿದ್ದರೂ, ಇಪಿಎಫ್‌ಒ ದಶಕಗಳಿಂದ ಈ ಮಿತಿಯನ್ನು ಪರಿಷ್ಕರಿಸುವ ಗೋಜಿಗೆ ಹೋಗಿಲ್ಲ’ ಎಂದು ಅರ್ಜಿದಾರರ ಪರ ವಕೀಲರಾದ ಪ್ರಣವ್‌ ಸಚ್‌ದೇವ ಮತ್ತು ನೇಹಾ ರಥಿ ವಾದಿಸಿದರು.

ಈ ಮಿತಿಗಿಂತ ಹೆಚ್ಚು ವೇತನ ಪಡೆಯುತ್ತಿರುವ ಉದ್ಯೋಗಿಗಳಿಗೆ ಅನ್ಯಾಯ ಆಗುತ್ತಿದೆ. ಇದು ಕಾರ್ಮಿಕರನ್ನು ಇಪಿಎಫ್‌ಒ ಯೋಜನೆಯ ಪ್ರಯೋಜನಗಳಿಂದ ವಂಚಿತರನ್ನಾಗಿಸುತ್ತಿದೆ ಎಂದು ಅವರು ಹೇಳಿದರು.

ಅರ್ಜಿಯನ್ನು ವಿಲೇವಾರಿ  ಮಾಡಿದ ಪೀಠವು, ಈ ಕುರಿತು ಎರಡು ವಾರಗಳಲ್ಲಿ ಆದೇಶದ ಪ್ರತಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದು ಅರ್ಜಿದಾರರಿಗೆ ತಿಳಿಸಿತು. ಅಲ್ಲದೆ, ಇದನ್ನು ಪರಿಶೀಲಿಸಿ ನಾಲ್ಕು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.