ADVERTISEMENT

ಹಾವು, ನಾಗರಹಾವು, ಮುಂಗುಸಿಗಳು ಈಗ ಉತ್ತರ ಪ್ರದೇಶ ಚುನಾವಣಾ ವಸ್ತು ವಿಷಯ!

ಐಎಎನ್ಎಸ್
Published 14 ಜನವರಿ 2022, 11:48 IST
Last Updated 14 ಜನವರಿ 2022, 11:48 IST
   

ಲಖನೌ: ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ ಹಾವುಗಳು, ನಾಗರಹಾವುಗಳು, ಮುಂಗುಸಿಗಳು ಈಗ ಚರ್ಚೆಯ ವಿಷಯವಾಗಿವೆ!

ಇದಲ್ಲದೆ, ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳನ್ನು ಮೂದಲಿಸಲು ಅಭ್ಯರ್ಥಿಗಳು 'ಡಗ್ಗಮಾರ್' (ಅನಧಿಕೃತ) ವಾಹನ, ಸೂರ್ಯ ಮತ್ತು ಕತ್ತಲೆ ಎಂಬ ವಿಷಯಗಳನ್ನೂ ಬಳಸಿಕೊಳ್ಳುತ್ತಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ರಾಜ್ಯದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು 'ಸೂರ್ಯ' ಎಂದು ಕೊಂಡಾಡಿದರು. ಅದೇ ವೇಳೆ, ಬಿಜೆಪಿ ತೊರೆದ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು 'ಅಂಧಕಾರ' (ಕತ್ತಲೆ) ಎಂದು ಗೇಲಿ ಮಾಡಿದರು.

ADVERTISEMENT

ಗೌರವ್‌ ಭಾಟಿಯಾ ಅವರು ಟ್ವಿಟರ್‌ನಲ್ಲಿ ಈ ಮೂದಲಿಕೆ ಮಾಡಿದ್ದರು. ನಂತರ ಅದನ್ನು ಅಳಿಸಿಹಾಕಿದರು. ಆದರೆ ಇದೇ ಕತ್ತಲು, ಬೆಳಕಿನ ವಿಚಾರವನ್ನು ಕಾನೂನು ಸಚಿವ ಬ್ರಜೇಶ್ ಪಾಠಕ್ ಮುಂದುವರಿಸಿ, ‘ಬಿಜೆಪಿಯು ಸೂರ್ಯನಿದ್ದಂತೆ. ಅಭಿವೃದ್ಧಿಯ ಬೆಳಕನ್ನು ಹರಡಿದೆ’ ಎಂದು ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಯಾಗಿ ಟ್ವೀಟ್‌ ಮಾಡಿದ ಸ್ವಾಮಿ ಪ್ರಸಾದ್ ಮೌರ್ಯ, ‘ನಾಗರಹಾವಿನಂಥ ಆರ್‌ಎಸ್‌ಎಸ್ ಮತ್ತು ಹಾವಿನಂಥ ಬಿಜೆಪಿಯನ್ನು ಮುಗಿಸುವ ಮುಂಗುಸಿಯೇ ಸ್ವಾಮಿ,’ಎಂದು ತಮ್ಮನ್ನು ಬಣ್ಣಿಸಿಕೊಂಡರು. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ನಾಗರಹಾವು, ಹಾವುಗಳಿಗೆ ಹೋಲಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಟ್ವೀಟ್ ಮಾಡಿ, ‘ಡಬಲ್ ಇಂಜಿನ್ ರೈಲಿನಲ್ಲಿ ಟಿಕೆಟ್ ಸಿಗದವರಿಗೆ, ಟಿಪ್ಪು ಸುಲ್ತಾನನ ಕೆಟ್ಟುಹೋದ ವಾಹನದಲ್ಲಿ ಸವಾರಿ ಮಾಡಲು ಕಾಳಸಂತೆಯಲ್ಲಿ ಟಿಕೆಟ್‌ ನೀಡಲಾಗುತ್ತಿದೆ,’ ಎಂದು ವ್ಯಂಗ್ಯವಾಡಿದ್ದಾರೆ.

‌‌ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಬಿಜೆಪಿಯು ಟಿಪ್ಪು ಎಂದು ಯಾವಾಗಲೂ ಕೆಣಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.