ADVERTISEMENT

ಬೆಳಗಾವಿ 2ನೇ ರಾಜಧಾನಿ: ಕುಮಾರಸ್ವಾಮಿ ವಿರುದ್ಧ ಶಿವಸೇನಾ ಗರಂ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 11:47 IST
Last Updated 2 ಆಗಸ್ಟ್ 2018, 11:47 IST
   

ಮುಂಬೈ (ಪಿಟಿಐ): ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿ ಮಾಡಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವುದರ ವಿರುದ್ಧ ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೋಗಬೇಕು. ಕುಮಾರಸ್ವಾಮಿ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ನೀಡಬೇಕು ಎಂದು ಶಿವಸೇನಾ ಆಗ್ರಹಿಸಿದೆ.

ಬೆಳಗಾವಿಗೆ ಸಂಬಂಧಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ವಿವಾದ ಇದೆ. ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಬಯಸುವವರ ಗಾಯಕ್ಕೆ ಉಪ್ಪು ಸವರಿದಂತೆ ಕುಮಾರಸ್ವಾಮಿಯವರ ಹೇಳಿಕೆ ಇದೆ ಎಂದು ಸೇನಾ ಹೇಳಿದೆ.

ಬೆಳಗಾವಿಯು ಹಿಂದೆ ಬಾಂಬೆ ಪ್ರಾಂತ್ಯದ ಭಾಗವಾಗಿತ್ತು. ಹಾಗಾಗಿ ಇದು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಆ ರಾಜ್ಯದ ವಾದ. ಆದರೆ, ಭಾಷಾವಾರು ರಾಜ್ಯ ರಚನೆಯಾದಾಗ ಭಾಷೆಯ ಆಧಾರದಲ್ಲಿ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸಲಾಯಿತು.

ADVERTISEMENT

ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆಯನ್ನು ಹೋಗಲಾಡಿಸುವುದಕ್ಕಾಗಿ ರಾಜ್ಯ ಸರ್ಕಾರದ ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸಲಾಗುವುದು ಎಂದು ಜುಲೈ 31ರಂದು ಕುಮಾರಸ್ವಾಮಿ ಹೇಳಿದ್ದರು.

ಬೆಳಗಾವಿ ಯಾವ ರಾಜ್ಯಕ್ಕೆ ಸೇರಬೇಕು ಎಂಬ ವಿಚಾರ ನ್ಯಾಯಾಲಯದಲ್ಲಿದೆ. ಹಾಗಿರುವಾಗ ಈ ನಗರವನ್ನು ಎರಡನೇ ರಾಜಧಾನಿ ಮಾಡುವ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹೇಗೆ ಸಾಧ್ಯ ಎಂದು ಸೇನಾ ಪ್ರಶ್ನಿಸಿದೆ.

ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ. ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಇಲ್ಲಿ ನಡೆಸಲಾಗುತ್ತಿದೆ. ಉಳಿದಂತೆ ಇಲ್ಲಿ ಮಹತ್ವದ ಚಟುವಟಿಕೆಗಳು ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.