ADVERTISEMENT

ಬಂಗಾಳ: ಟಿಎಂಸಿ ಹಿರಿಯ ನಾಯಕರ ವಿರುದ್ಧ ಕಾನೂನು ಕ್ರಮ, ಸಿಬಿಐಗೆ ರಾಜ್ಯಪಾಲರ ಅಸ್ತು

​ಪ್ರಜಾವಾಣಿ ವಾರ್ತೆ
Published 9 ಮೇ 2021, 19:44 IST
Last Updated 9 ಮೇ 2021, 19:44 IST
ರಾಜ್ಯಪಾಲ ಜಗದೀಪ್ ಧನ್‌ಕರ್‌
ರಾಜ್ಯಪಾಲ ಜಗದೀಪ್ ಧನ್‌ಕರ್‌   

ಕೋಲ್ಕತ್ತ: ಪಶ್ಚಿಮ ಬಂಗಾಳದ ಹೊಸ ಸಚಿವ ಸಂಪುಟದ ಪ್ರಮಾಣ ವಚನಕ್ಕೆ ಒಂದು ದಿನ ಮೊದಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಹಿರಿಯ ಮುಖಂಡರು ಮತ್ತು ಶಾಸಕರ ವಿರುದ್ಧ ಸಿಬಿಐ ತನಿಖೆಗೆ ರಾಜ್ಯಪಾಲ ಜಗದೀಪ್‌ ಧನ್‌ಕರ್ ಅವರು ಅನುಮತಿ ನೀಡಿದ್ದಾರೆ.

ಫಿರ್ಹಾದ್‌ ಹಕೀಮ್‌, ಸುಬ್ರತಾ ಮುಖರ್ಜಿ, ಮದನ್‌ ಮಿತ್ರಾ ಮತ್ತು ಸೋವನ್‌ ಚಟರ್ಜಿ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಸಮ್ಮತಿ ನೀಡಿದ್ದಾರೆ.

ಹಕೀಮ್‌, ಮುಖರ್ಜಿ ಮತ್ತು ಮಿತ್ರಾ ಅವರು ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದರು. ಚಟರ್ಜಿ ಅವರು ಟಿಎಂಸಿ ಸರ್ಕಾರದಲ್ಲಿ ಹಿಂದೆ ಸಚಿವರಾಗಿದ್ದವರು. 2019ರಲ್ಲಿ ಬಿಜೆಪಿ ಸೇರಿದ್ದರು. ಬಿಜೆಪಿ ಜತೆಗಿನ ಸಂಬಂಧವನ್ನು ಇತ್ತೀಚೆಗೆ ಕಡಿದುಕೊಂಡಿದ್ದಾರೆ.

ADVERTISEMENT

ಅಪರಾಧ ಕೃತ್ಯ ನಡೆದ ಸಂದರ್ಭದಲ್ಲಿ ಈ ಎಲ್ಲರೂ ಶಾಸಕರಾಗಿದ್ದರು ಎಂಬ ಕಾರಣಕ್ಕೆ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರ ಅನುಮತಿ ಬೇಕಾಗಿದೆ ಎಂದು ಮಾಧ್ಯಮದಲ್ಲಿ ಪ್ರಕಟವಾಗಿತ್ತು.

ಆದರೆ, ಅದು ನಿಜವಲ್ಲ, ಮಮತಾ ಬ್ಯಾನರ್ಜಿ ಸಚಿವ ಸಂಪುಟದಲ್ಲಿ ಅವರು ಸಚಿವರಾಗಲಿರುವುದರಿಂದ ಸಿಬಿಐ ತನಿಖೆಗೆ ರಾಜ್ಯಪಾಲರ ಅನುಮತಿ ಅಗತ್ಯ ಎಂದು ಧನ್‌ಕರ್‌ ಅವರು ಟ್ವೀಟ್‌ ಮಾಡಿದ್ದಾರೆ.

ನಾರದಾ ಮಾರುವೇಷದ ಕಾರ್ಯಾಚರಣೆಗೆ ಸಂಬಂಧಿಸಿ ಈ ಎಲ್ಲರ ವಿರುದ್ಧ ತನಿಖೆಗೆ ಅನುಮತಿ ಕೊಡಬೇಕು ಎಂದು ರಾಜ್ಯಪಾಲರನ್ನು ಸಿಬಿಐ ಕೋರಿತ್ತು.

ಮಮತಾ ವಿರುದ್ಧ ಧನ್‌ಕರ್‌ ಟೀಕೆ
ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿ ಮಮತಾ ಬ್ಯಾನರ್ಜಿ ಅವರನ್ನು ರಾಜ್ಯಪಾಲ ಜಗದೀಪ್ ಧನ್‌ಕರ್‌ ಟೀಕಿಸಿದ್ದಾರೆ. ‘ತಮ್ಮ ಮತದ ಹಕ್ಕು ಚಲಾಯಿಸಿದವರ ಮೇಲೆ ಹಿಂಸೆ ಎಸಗುವುದು ನೊಬೆಲ್‌ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌ ಅವರ ಕನಸು ಆಗಿರಲಿಲ್ಲ’ ಎಂದು ಧನ್‌ಕರ್ ಟ್ವೀಟ್‌ ಮಾಡಿದ್ದಾರೆ. ಟ್ಯಾಗೋರ್ ಜನ್ಮದಿನವಾದ ಭಾನುವಾರ ಅವರು ಹೀಗೆ ಹೇಳಿದ್ದಾರೆ.

ಟಿಎಂಸಿ ಕಾರ್ಯಕರ್ತರೊಬ್ಬರ ಹತ್ಯೆಗೆ ಸಂಬಂಧಿಸಿ 12 ಮಂದಿಯನ್ನು ಭಾನುವಾರ ಬಂಧಿಸಲಾಗಿದೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬಿರ್‌ಭೂಮ್‌ ಜಿಲ್ಲೆಯಲ್ಲಿ ಸಂಘರ್ಷ ನಡೆದಿತ್ತು. ಶುಕ್ರವಾರ ರಾತ್ರಿಯ ಈ ಘಟನೆಯಲ್ಲಿ ಟಿಎಂಸಿಯ ಒಂಬತ್ತು ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಚುನಾವಣೋತ್ತರ ಹಿಂಸಾಚಾರದ ಸತ್ಯಶೋಧಕ್ಕಾಗಿ ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಬಂಗಾಳಕ್ಕೆ ಕಳುಹಿಸಿರುವ ತಂಡವು ವಿವಿಧೆಡೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.