ADVERTISEMENT

ಭವಾನಿಪುರ ಉಪಚುನಾವಣೆ: ದಿಲೀಪ್ ಘೋಷ್ ಮೇಲೆ ಟಿಎಂಸಿ ಬೆಂಬಲಿಗರಿಂದ ಹಲ್ಲೆ– ಆರೋಪ

ಐಎಎನ್ಎಸ್
Published 27 ಸೆಪ್ಟೆಂಬರ್ 2021, 12:28 IST
Last Updated 27 ಸೆಪ್ಟೆಂಬರ್ 2021, 12:28 IST
ದಿಲೀಪ್ ಘೋಷ್: ಪಿಟಿಐ ಚಿತ್ರ
ದಿಲೀಪ್ ಘೋಷ್: ಪಿಟಿಐ ಚಿತ್ರ   

ಭವಾನಿಪುರ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಕೊನೆಯ ದಿನ ಉದ್ವಿಗ್ನತೆ ಭುಗಿಲೆದ್ದಿದೆ. ಸೋಮವಾರ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಪ್ರಿಯಾಂಕಾ ಟಿಬ್ರೆವಾಲ್ ಪರ ಪ್ರಚಾರ ಮಾಡುತ್ತಿದ್ದ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಅವರಿಗೆ ದೈಹಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಭಬಾನಿಪುರ ಕ್ಷೇತ್ರ ವ್ಯಾಪ್ತಿಯ ಜಡುಬಾಬರ್ ಬಜಾರ್ (ಜದು ಬಾಬು ಮಾರುಕಟ್ಟೆ) ಬಳಿ ಈ ಘಟನೆ ನಡೆದಿದ್ದು, ಕೆಲವು ತೃಣಮೂಲ ಬೆಂಬಲಿಗರು ಘೋಷ್ ಅವರ ಮಾರ್ಗವನ್ನು ಬಂದ್ ಮಾಡಿ ಅವರನ್ನು ರಸ್ತೆಯ ಬದಿಗೆ ತಳ್ಳಿದ್ದಾರೆ. ಬಳಿಕ, ‘ಜೈ ಬಾಂಗ್ಲಾ’ಎಂದು ಘೋಷಣೆಯನ್ನು ಕೂಗಲು ಪ್ರಾರಂಭಿಸಿದರು ಎಂದು ವರದಿಯಾಗಿದೆ.

ದಿಲೀಪ್ ಘೋಷ್ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ, ಜನಸಮೂಹವನ್ನು ಚದುರಿಸಲು ಸಿಬ್ಬಂದಿ ತಮ್ಮ ಬಂದೂಕುಗಳನ್ನು ತೋರಿಸಿದರು ಎಂದು ತಿಳಿದು ಬಂದಿದೆ. ಘೋಷ್ ಅವರನ್ನು ಸುತ್ತುವರಿದ ಸಿಬ್ಬಂದಿ ಆ ಪ್ರದೇಶದಿಂದ ಅವರನ್ನು ಕರೆದೊಯ್ದರು. ಗಲಭೆಯಲ್ಲಿ ಓರ್ವ ಬಿಜೆಪಿ ಬೆಂಬಲಿಗ ಗಾಯಗೊಂಡಿದ್ದಾರೆ.

ADVERTISEMENT

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಘೋಷ್, ‘ನೋಡಿ ಇದು ಪಶ್ಚಿಮ ಬಂಗಾಳದ ಪರಿಸ್ಥಿತಿ. ಅವರು ಯಾರನ್ನೂ ಪ್ರಚಾರ ಮಾಡಲು ಸಹ ಬಿಡುವುದಿಲ್ಲ. ನಾನು ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಲು ಇಲ್ಲಿಗೆ ಬಂದ ಕಾರಣ ನನ್ನನ್ನು ತಳ್ಳಿದರು ಮತ್ತು ಥಳಿಸಿದರು. ರಾಜ್ಯದಲ್ಲಿ ಪ್ರಜಾಪ್ರಭುತ್ವವಿಲ್ಲ. ನಾವು ಈ ಬಗ್ಗೆ ದೂರು ನೀಡುತ್ತೇವೆ’ಎಂದಿದ್ದಾರೆ.

‘ನಾವು ಹಿರಿಯ ವ್ಯಕ್ತಿಯ ಪಾದಗಳನ್ನು ಮುಟ್ಟುತ್ತೇವೆ. ಇದು ಬಂಗಾಳದ ಸಂಸ್ಕೃತಿ. ಯಾವುದನ್ನಾದರೂ ಮರೆತುಬಿಡಿ. ಆದರೆ, ದಿಲೀಪ್ ಘೋಷ್ ಅವರ ವಯಸ್ಸನ್ನು ನೋಡಿ. ಅವರ ಮೇಲೆ ಕೈಮಾಡಲಾಗುತ್ತಿದೆ’ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಹೇಳಿದರು.

‘ಹಿರಿಯರನ್ನು ಥಳಿಸುವುದು ರಾಜ್ಯದ ಸಂಸ್ಕೃತಿಯೇ? ನಾನು ಇವುಗಳನ್ನು ಕಲಿತಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಥವಾ ಅಭಿಷೇಕ್ ಬ್ಯಾನರ್ಜಿ ದೆಹಲಿಗೆ ಹೋದಾಗ ನಾವು ಅವರ ದಾರಿಯನ್ನು ತಡೆದು 'ಜೈ ಶ್ರೀ ರಾಮ್' ಘೋಷಣೆ ಕೂಗಬಹುದು. ನಾವು ಇದನ್ನು ಮಾಡಿದ್ದೇವೆಯೇ?’ಅವರು ಎಂದು ಪ್ರಶ್ನಿಸಿದ್ಧಾರೆ.

‘ಅವರು ಕೇವಲ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿಲ್ಲ, ರಾಜ್ಯದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ. ಬಂಗಾಳದ ಜನರು ಈ ಹೆಮ್ಮೆಯ ಮಹಿಳೆ(ಮಮತಾ ಬ್ಯಾನರ್ಜಿ)ಯನ್ನು ಕಿತ್ತೆಸೆಯುತ್ತಾರೆ’ ಎಂದು ಅವರು ಕಿಡಿ ಕಾರಿದ್ದಾರೆ.

ಸೆಪ್ಟೆಂಬರ್ 30ರಂದು ಭವಾನಿಪುರ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.