ADVERTISEMENT

ಜನಸಂಖ್ಯೆ ಕುರಿತ ಭಾಗವತ್‌ ಹೇಳಿಕೆ: ವಿರೋಧ– ಸ್ವಾಗತ

ಪಿಟಿಐ
Published 2 ಡಿಸೆಂಬರ್ 2024, 22:30 IST
Last Updated 2 ಡಿಸೆಂಬರ್ 2024, 22:30 IST
<div class="paragraphs"><p>ಮೋಹನ್‌ ಭಾಗವತ್‌</p></div>

ಮೋಹನ್‌ ಭಾಗವತ್‌

   

ನವದೆಹಲಿ: ಜನಸಂಖ್ಯೆ ಕುರಿತಂತೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ನೀಡಿರುವ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಬಿಜೆಪಿಯ ಹಲವು ನಾಯಕರು ಸಹಮತ
ವ್ಯಕ್ತಪಡಿಸಿದ್ದಾರೆ.

‘ಭಾರತದಲ್ಲಿ ಫಲವತ್ತತೆ ದರವು ಕುಸಿಯತೊಡಗಿದೆ. ಇದು ಹೀಗೇ ಮುಂದುವರಿದರೆ ನಮ್ಮ ಸಮಾಜವು ನಶಿಸಿಹೋಗುತ್ತದೆ. ಆದ್ದರಿಂದ ಪ್ರತಿಯೊಂದು ದಂಪತಿಗೆ ಕನಿಷ್ಠ ಮೂವರು ಮಕ್ಕಳು ಇರಬೇಕು’ ಎಂದು ಭಾಗವತ್‌ ಭಾನುವಾರ ಹೇಳಿದ್ದರು.

ADVERTISEMENT

‘ಈಗ ಇರುವವರಿಗೇ ಉದ್ಯೋಗ ದೊರೆಯುತ್ತಿಲ್ಲ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಮೂವರು ಮಕ್ಕಳನ್ನು ಹೆತ್ತರೆ ದೇಶದ ಜನಸಂಖ್ಯೆಯು ಏರಿಕೆಯಾಗಲಿದೆ. ಮುಂದೆ ಜನಿಸುವ ಮಕ್ಕಳಿಗೆ ಎಲ್ಲಿಂದ ಮೂಲಸೌಕರ್ಯಗಳನ್ನು ಒದಗಿಸುತ್ತೀರಿ’ ಎಂದು ವಿರೋಧ ಪಕ್ಷಗಳ ನಾಯಕರು ಸೋಮವಾರ ಪ್ರಶ್ನಿಸಿದ್ದಾರೆ.

‘ರಾಜಕೀಯ ಕಾರ್ಯಸೂಚಿಗಾಗಿ ಇಂಥ ಹೇಳಿಕೆ ನೀಡಲಾಗುತ್ತದೆ. ಇದಕ್ಕೆಲ್ಲ ಸಾಮಾನ್ಯ ಜನರು ಬೆಲೆ ತೆರಬೇಕಾಗು ತ್ತದೆ. ಸೂಕ್ತ ರೀತಿಯಲ್ಲಿ ಜನಸಂಖ್ಯೆಯನ್ನು ನಿರ್ವಹಿಸಿದರೆ, ದೇಶಕ್ಕೆ ಆಸ್ತಿಯಾಗಲಿದೆ. ಆದರೆ, ಹಾಗೆ ಮಾಡಲಾಗುತ್ತಿಲ್ಲ. ದೇಶದಲ್ಲಿ ಉತ್ಪಾದನೆಯನ್ನು ಆರಂಭಿಸಬೇಕು, ಆಗ ಜನರಿಗೆ ಉದ್ಯೋಗ ದೊರೆಯುತ್ತದೆ. ಆದರೆ, ಕೇಂದ್ರ ಸರ್ಕಾರ ಇದನ್ನು ಮಾಡುತ್ತಿಲ್ಲ’ ಎಂದು ಆಜಾದ್‌ ಸಮಾಜ್‌ ಪಕ್ಷದ (ಕಾನ್ಶಿರಾಮ್‌) ಸಂಸದ ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ. 

‘ಜನಸಂಖ್ಯೆ ವಿಚಾರದಲ್ಲಿ ಭಾಗವತ್‌ ಅವರ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆಗಳನ್ನು ಬಿಜೆಪಿ ನಾಯಕರು ಈ ಹಿಂದೆ ನೀಡಿದ್ದಾರೆ. ದೇಶದ ಜನಸಂಖ್ಯೆ ಯನ್ನು ನಿಯಂತ್ರಿಸಬೇಕು ಎಂದು ಹಲವರು ಹೇಳಿದ್ದರು. ಈ ವಿರೋಧಾಭಾಸಗಳನ್ನು ಸರಿಪಡಿಸಿಕೊಂಡು ಕೇಂದ್ರ ಸರ್ಕಾರವು ನೀತಿ ರೂಪಿಸಬೇಕು’ ಎಂದು ಕಾಂಗ್ರೆಸ್‌ ಸಂಸದ ತಾರಿಕ್ ಅನ್ವರ್‌ ಹೇಳಿದ್ದಾರೆ.

ಭಾಗವತ್ ಮಾತು ರಾಷ್ಟ್ರೀಯ ನೀತಿಗೆ ವಿರುದ್ಧ (ಬೆಂಗಳೂರು ವರದಿ): ‘ಮೋಹನ್ ಭಾಗವತ್ ಅವರ ಹೇಳಿಕೆ ರಾಷ್ಟ್ರೀಯ ನೀತಿಗೆ ವಿರುದ್ಧವಾದುದು’ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ.

‘ದೇಶದ ಜನರು ಸಮಾನವಾದ ಘನತೆಯ ಬದುಕು ನಡೆಸಲು ಜನಸಂಖ್ಯಾ ಸ್ಫೋಟವೇ ಅಡ್ಡಿ. ಹೀಗಿರುವಾಗ, ಮೋಹನ್ ಭಾಗವತ್ ಅವರು ಜವಾಬ್ದಾರಿ ಅರಿತು ಮಾತನಾಡಬೇಕು’ ಎಂದಿದ್ದಾರೆ.

ಮೋಹನ್‌ ಭಾಗವತ್‌ ಅವರನ್ನು ಗೌರವಿಸುತ್ತೇನೆ, ಆದರೆ ಮಕ್ಕಳನ್ನು ಸಲಹುವುದರ ಕುರಿತು ಅವರಿಗೆ ಏನು ತಿಳಿದಿದೆ? ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ, ಉದ್ಯೋಗ ಇಲ್ಲ, ಜನರು ಯಾತಕ್ಕಾಗಿ ಹೆಚ್ಚಿನ ಮಕ್ಕಳನ್ನು ಹೊಂದಿರಬೇಕು
ರೇಣುಕಾ ಚೌಧರಿ, ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯೆ
ರ್‌ಎಸ್‌ಎಸ್‌ ಒಂದು ದೇಶಭಕ್ತ ಸಂಸ್ಥೆ. ಮೋಹನ್‌ ಭಾಗವತ್‌ ಅವರು ಏನೋ ಒಂದು ಹೇಳುತ್ತಿದ್ದಾರೆ ಅಂದರೆ ಅದು ರಾಷ್ಟ್ರೀಯ ಹಿತಕ್ಕಾಗಿಯೇ ಆಗಿರುತ್ತದೆ. ಇದನ್ನು ಸಕಾರಾತ್ಮಕವಾಗಿ ಗ್ರಹಿಸಬೇಕು
ಮನೋಜ್‌ ತಿವಾರಿ, ಬಿಜೆಪಿ ಸಂಸದ
ಅವರ ವಿಚಾರಗಳು ದೇಶದ ಹಿತಕ್ಕಾಗಿ ಇರುತ್ತವೆ. ಅವರೊಬ್ಬ ಮಾಗಿದ ವ್ಯಕ್ತಿ. ಅವರು ಇಂಥ ಹೇಳಿಕೆ ನೀಡಿದ್ದಾರೆ ಎಂದರೆ ಅದು ದೇಶಕ್ಕೆ ಒಳ್ಳೆಯದೇ ಆಗಿರುತ್ತದೆ. ಅವರು ಸರಿಯಾಗಿದ್ದನ್ನೇ ಹೇಳಿರುತ್ತಾರೆ
ಅರುಣ್‌ ಗೋವಿಲ್‌, ಬಿಜೆಪಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.