ADVERTISEMENT

ಭೀಮಾ–ಕೋರೆಗಾಂವ್ ಪ್ರಕರಣ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 19:47 IST
Last Updated 28 ಸೆಪ್ಟೆಂಬರ್ 2018, 19:47 IST

ನವದೆಹಲಿ: ಭೀಮಾ–ಕೋರೆಗಾಂವ್ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ ನಿರ್ಧಾರದಿಂದಾಗಿ ರಾಷ್ಟ್ರೀಯ ಭದ್ರತೆಯಲ್ಲಿ ರಾಜಕೀಯ ಬೆರೆಸಲು ಹೊರಟಿದ್ದ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

‘ಬಿಜೆಪಿ ಮೊದಲಿನಿಂದಲೂ ಅಂಟಿಕೊಂಡಿದ್ದ ನಿಲುವನ್ನು ಕೋರ್ಟ್ ಸಮರ್ಥಿಸಿದೆ. ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಿದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಇದರಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದೆ.

‘ಮೂರ್ಖತನಕ್ಕೆ ಒಂದೇ ಒಂದು ಜಾಗವಿದೆ ಎಂದರೆ ಅದು ಕಾಂಗ್ರೆಸ್‌ ಮಾತ್ರ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಲೇವಡಿ ಮಾಡಿದ್ದಾರೆ. ಹೋರಾಟಗಾರರ ಬಂಧನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು, ಮತಭೇದ ಹತ್ತಿಕ್ಕುವ ಕೆಲಸ ನಡೆದಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಸುಪ್ರೀಂ ಕೋರ್ಟ್ ಆದೇಶದಂತೆ ಮಹಾರಾಷ್ಟ್ರ ಸರ್ಕಾರವು ಸಂಬಂಧಿಸಿದ ನ್ಯಾಯಾಲಯದ ಮೊರೆ ಹೋಗಲಿದೆ ಎಂದು ತಿಳಿಸಿದ್ದಾರೆ.

ವೃತ್ತಿಪರ ತನಿಖೆಗೆ ಸಂದ ಜಯ:ಸುಪ್ರೀಂ ಕೋರ್ಟ್‌ ತೀರ್ಪನ್ನು ಪುಣೆ ಪೊಲೀಸ್‌ ಮುಖ್ಯಸ್ಥ ಕೆ. ವೆಂಕಟೇಶಂ ಸ್ವಾಗತಿಸಿದ್ದು, ವೃತ್ತಿಪರವಾಗಿ ಪ್ರಕರಣದ ತನಿಖೆ ಮುಮದುವರಿಸುವುದಾಗಿ ಭರವಸೆ ನೀಡಿದ್ದಾರೆ. ಇಲ್ಲಿಯವರೆಗಿನ ತನಿಖೆ ಕಾನೂನು ಚೌಕಟ್ಟಿನ ಪರಧಿಯಲ್ಲಿಯೇ ನಡೆದಿದೆ. ಅದನ್ನು ಕೋರ್ಟ್‌ ಕೂಡ ಒಪ್ಪಿಕೊಂಡಿದೆ ಎಂದು ಜಂಟಿ ಪೊಲೀಸ್‌ ಆಯುಕ್ತ ಶಿವಾಜಿ ಬೊಡ್ಕೆ ಪ್ರತಿಕ್ರಿಯಿಸಿದ್ದಾರೆ.

ತೀರ್ಪು ನಿರೀಕ್ಷಿಸಿರಲಿಲ್ಲ: ಖಂಡಿತ ನಾವು ಈ ರೀತಿಯ ತೀರ್ಪು ನಿರೀಕ್ಷಿಸಿರಲಿಲ್ಲ. ಸುಳ್ಳು ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ದಾಖಲಿಸಿರುವ ಪ್ರಕರಣ ವಜಾಗೊಳ್ಳಬಹುದು ಎಂಬ ನಿರೀಕ್ಷೆ ಇತ್ತು ಎಂದು ತೆಲುಗು ಕ್ರಾಂತಿಕಾರಿ ಕವಿ ವರವರ ರಾವ್‌ ಅವರ ಪತ್ನಿ ಹೇಮಲತಾ ನಿರಾಸೆ ವ್ಯಕ್ತಪಡಿಸಿದ್ದಾರೆ. ಹೋರಾಟಗಾರರ ವಿರುದ್ಧದ ಪ್ರಕರಣ ಕೈಬಿಡುವಂತೆ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ರಾವ್‌ ಅವರ ಸಹೋದರನ ಪುತ್ರ ಗೋಪಾಲ್‌ ರಾವ್‌ ತಿಳಿಸಿದ್ದಾರೆ.

**

ಹೋರಾಟಗಾರರ ಬಂಧನ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಲು ಹೊರಟಿದ್ದ ಕಾಂಗ್ರೆಸ್‌ ಈಗಲಾದರೂ ದೇಶದ ಕ್ಷಮೆ ಯಾಚಿಸಲಿ.
-ಅಮಿತ್‌ ಶಾ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

**

ನಗರ ನಕ್ಸಲರು ಪ್ರಧಾನಿ ನರೆಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವ ಮಹಾರಾಷ್ಟ್ರ ಪೊಲೀಸರ ವಾದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.

-ದೇವೇಂದ್ರ ಫಡಣವೀಸ್‌,ಮಹಾರಾಷ್ಟ್ರ ಮುಖ್ಯಮಂತ್ರಿ

**

ಸುಪ್ರೀಂ ಕೋರ್ಟ್ ತೀರ್ಪು ದುರದೃಷ್ಟಕರ ಮತ್ತು ಅನಿರೀಕ್ಷಿತ

– ಪಿ. ವರವರ ರಾವ್‌ ಕುಟುಂಬ ಸದಸ್ಯರು

**

ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವ ಏಕೈಕ ಗುರಿ ಹೊಂದಿರುವ ಕಾಂಗ್ರೆಸ್‌ಗೆ ಆ ಕೆಲಸ ಮಾಡಲು ಪಾಕಿಸ್ತಾನವಾದರೂ ಸರಿ, ನಕ್ಸಲರಾದರೂ ಸರಿ

-ಸಂಬೀತ್ ಪಾತ್ರ,ಬಿಜೆಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.