ADVERTISEMENT

ನಿತೀಶ್‌ಗೆ ಆಡಳಿತ ವಿರೋಧಿ ಅಲೆಯ ಕಾಟ

ಬಿಹಾರ ಚುನಾವಣೆ: ಮೈತ್ರಿ ಕೂಟ ಗೊಂದಲ

ಸಿದ್ದಯ್ಯ ಹಿರೇಮಠ
Published 27 ಸೆಪ್ಟೆಂಬರ್ 2020, 20:29 IST
Last Updated 27 ಸೆಪ್ಟೆಂಬರ್ 2020, 20:29 IST
ನಿತೀಶ್ ಕುಮಾರ್
ನಿತೀಶ್ ಕುಮಾರ್   

ನವದೆಹಲಿ: ಕೊರೊನಾ ಕಾಲದ ಮೊಟ್ಟಮೊದಲ ಚುನಾವಣೆ (ಅಕ್ಟೋಬರ್‌ 28ರಿಂದ ನವೆಂಬರ್‌ 7ರವರೆಗೆ)ಗೆ ಅಣಿಯಾಗಿರುವ ಬಿಹಾರದಲ್ಲಿ, 243 ಸದಸ್ಯಬಲದ ವಿಧಾನಸಭೆಯಲ್ಲಿ ಅಧಿಪತ್ಯ ಸಾಧಿಸಲು ಮೈತ್ರಿಕೂಟಗಳು ಸನ್ನದ್ಧವಾಗಿವೆ.

ಸಂಯುಕ್ತ ಜನತಾದಳ (ಜೆಡಿಯು)– ಬಿಜೆಪಿ ಮತ್ತಿತರ ಪಕ್ಷಗಳ ಮೈತ್ರಿಯ ಎನ್‌ಡಿಎ ಹಾಗೂ ರಾಷ್ಟ್ರೀಯ ಜನತಾದಳ (ಆರ್‌ಜೆಡಿ)– ಕಾಂಗ್ರೆಸ್‌ ಮತ್ತು ಎಡ ಪಕ್ಷಗಳ ಮೈತ್ರಿಯ ಮಹಾ ಘಟಬಂಧನವು ಕೊರೊನಾ ಆತಂಕದ ನಡುವೆಯೇ ಬಂದಿರುವ ಚುನಾವಣೆಯಲ್ಲಿ ಸತ್ವಪರೀಕ್ಷೆಗೆ ಇಳಿಯಲಿವೆ.

15 ವರ್ಷಗಳಿಂದ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಜೆಡಿಯುದ ನಿತೀಶಕುಮಾರ್ ಅವರು ಈ ಬಾರಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ತೆಕ್ಕೆಗೆ ಜಾರಿದ್ದಾರೆ.

ADVERTISEMENT

2010ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಕೈಹಿಡಿದು ದಾಖಲೆಯ 201 ಸ್ಥಾನಗಳಲ್ಲಿ ಜಯಿಸಿ ಎರಡನೇ ಬಾರಿಗೆ ಅಧಿಕಾರ ಹಿಡಿದಿದ್ದ ನಿತೀಶಕುಮಾರ್, 2013ರಲ್ಲಿ ಬಿಜೆಪಿಯು ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದನ್ನೇ ವಿರೋಧಿಸಿ ಎನ್‌ಡಿಎದಿಂದ ದೂರ ಉಳಿದಿದ್ದರು.

2015ರ ಚುನಾವಣೆಯಲ್ಲಿ ಆರ್‌ಜೆಡಿ– ಕಾಂಗ್ರೆಸ್‌ ಜೊತೆ ಸ್ನೇಹ ಬೆಳೆಸಿ ಗೆದ್ದಿದ್ದಲ್ಲದೆ, ಮೋದಿ ಜನಪ್ರಿಯತೆಗೇ ಧಕ್ಕೆ ತಂದು, ಎರಡು ವರ್ಷ ಮೈತ್ರಿ ಸರ್ಕಾರ ನಡೆಸಿದ್ದರು. 2017ರಲ್ಲಿ ಘಟಬಂಧನದ ಜೊತೆಗಿನ ಸಹವಾಸ ತೊರೆದು ಮತ್ತೆ ಬಿಜೆಪಿ ಸಖ್ಯ ಬಯಸಿ 2019ರ ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿದ್ದಾರೆ.

ಸತತ ಮೂರು ಬಾರಿ ಅಧಿಕಾರ ನಡೆಸಿರುವ ನಿತೀಶ್‌, ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಆದರೂ ವಿರೋಧ ಪಕ್ಷಗಳ ದುರ್ಬಲ ನಾಯಕತ್ವ ಹಾಗೂ ಮುಂದುವರಿದಿರುವ ಮೋದಿ ಜನಪ್ರಿಯತೆಯ ನೆರವಿನಿಂದ ಈ ಬಾರಿಯೂ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವ ಸಾಧ್ಯತೆಗಳು ದಟ್ಟವಾಗಿವೆ.

ಕಾಂಗ್ರೆಸ್‌ ಮತ್ತು ಸಿಪಿಐ, ಸಿಪಿಎಂ, ಸಿಪಿಐಎಂಎಲ್‌ ಒಳಗೊಂಡ ಎಡಪಕ್ಷಗಳೊಂದಿಗೆ ಕೈಜೋಡಿಸಿ ರೂಪಿಸಿಕೊಂಡಿರುವ ‘ಮಹಾ ಘಟಬಂಧನ’ದೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಆರ್‌ಜೆಡಿಗೆ ಪ್ರಮುಖ ನಾಯಕರಿಲ್ಲದಿರುವ ಚಿಂತೆ ಎದುರಾಗಿದೆ.

ಜೈಲಿನ ಪಾಲಾಗಿರುವ ಲಾಲು ಪ್ರಸಾದ್ ಅವರ ಜನಪ್ರಿಯತೆ ಕ್ಷೀಣಿಸಿರುವುದು, ಅವರ ಪುತ್ರ ತೇಜಸ್ವಿ ಯಾದವ್‌ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರೂ ಗಮನ ಸೆಳೆಯದಿರುವುದು ಜನತೆ ಮಹಾ ಘಟಬಂಧನದತ್ತ ತಾತ್ಸಾರ ತೋರುವಂತಾಗಿದೆ.

ಅತ್ತ ಆಡಳಿತಾರೂಢ ಎನ್‌ಡಿಎನಲ್ಲಿ ಪ್ರಮುಖ ಸ್ಥಾನ ಹೊಂದಿರುವ ಜೆಡಿಯುಗೆ ರಾಮ್‌ ವಿಲಾಸ್ ಪಾಸ್ವಾನ್‌ ಅವರ ಲೋಕಜನ ಶಕ್ತಿ ಪಕ್ಷವು ಸೀಟು ಹಂಚಿಕೆ ವಿಷಯದಲ್ಲಿ ತಲೆನೋವಾಗಿದ್ದರೆ, ಅದನ್ನು ಸಂಭಾಳಿಸುವ ಹೊಣೆಗಾರಿಕೆ ಬಿಜೆಪಿ ಹೆಗಲೇರಿದೆ.

ಅಷ್ಟು ಮಾತ್ರವಲ್ಲದೆ, ಈ ಬಾರಿ ನಿತೀಶಕುಮಾರ್ ಬದಲಿಗೆ ಬೇರೆಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿಸಬೇಕು ಎಂಬ ಕೂಗು ಪಾಸ್ವಾನ್ ಅವರ ಪಕ್ಷದಿಂದ ಕೇಳಿಬರುತ್ತಿದೆ.

ಇತ್ತ ಮಹಾ ಘಟಬಂಧನದಲ್ಲಿರುವ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ)ದ ಉಪೇಂದ್ರ ಕುಶ್ವಾಹಾ ಅವರೂ ಆರ್‌ಜೆಡಿಯಲ್ಲಿ ತೇಜಸ್ವಿ ಯಾದವ್ ಹೊರತಾದ ನಾಯಕತ್ವಕ್ಕೆ ಬೇಡಿಕೆ ಇರಿಸಿ ಗೊಂದಲ ಮೂಡಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ಅವರು ಕೊನೆ ಕ್ಷಣದಲ್ಲಿ ಎನ್‌ಡಿಎ ಮೈತ್ರಿಕೂಟದತ್ತ ಮುಖ ಮಾಡುವ ಸಾಧ್ಯತೆಗಳೂ ಇವೆ.

ಕಳೆದ ಬಾರಿಯ ಚುನಾವಣೆಯಲ್ಲಿ 27 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ಗೆ ಈ ಬಾರಿಯೂ ಆಶಾಭಾವ ಎಂಬುದಿಲ್ಲ. ಮುಂಚೂಣಿ ಮುಖಂಡರ ಕೊರತೆ ಎದುರಿಸುತ್ತಿರುವ ಈ ಪಕ್ಷಕ್ಕೆ ಘಟಕಬಂಧನದಲ್ಲಿ ಮುಂಚೂಣಿ ಸ್ಥಾನವೂ ಉಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.