
ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮಹಿಳೆಯರಿಗೆ ಹಣ ವರ್ಗಾವಣೆ ಮಾಡಿದ್ದರಿಂದ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಸಾಧಿಸಿದೆ ಎಂದು ಜನ ಸುರಾಜ್ ಪಕ್ಷ ಶನಿವಾರ ಆರೋಪಿಸಿದೆ.
ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಅಡಿ ತಲಾ ₹10 ಸಾವಿರ ಹಣವನ್ನು ಬಿಹಾರದ ಮಹಿಳೆಯರಿಗೆ ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಲಾಗಿತ್ತು. ಇದಕ್ಕಾಗಿ ₹40 ಸಾವಿರ ಕೋಟಿ ಹಣವನ್ನು ಬಿಡುಗಡೆಗೊಳಿಸಲಾಗಿತ್ತು.
ಮಹಿಳೆಯರ ಖಾತೆಗಳಿಗೆ ಹಣ ಹಾಕುವ ಮೂಲಕ ಚುನಾವಣೆಗಾಗಿ ಸರ್ಕಾರವು ಲಂಚ ನೀಡಿದೆ. ಈ ಮೂಲಕ ಮತದಾರರನ್ನು ಕೊಂಡುಕೊಳ್ಳಲಾಗಿದೆ. ಅಧಿಕಾರಕ್ಕೆ ಬಂದ ನಂತರ ಬಾಕಿ ಉಳಿದಿರುವ ₹2 ಲಕ್ಷ ಹಣವನ್ನು ಮಹಿಳೆಯ ಖಾತೆಗಳಿಗೆ ವರ್ಗಾಹಿಸಲಾಗುತ್ತದೆಯೇ ಎನ್ನುವುದನ್ನು ನೋಡಬೇಕಿದೆ ಎಂದು ಜನ ಸುರಾಜ್ ಪಕ್ಷದ ರಾಷ್ಟ್ರಾಧ್ಯಕ್ಷ ಉದಯ್ ಸಿಂಗ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ನಮಗೆ ನಿರಾಸೆಯಾಗಿದೆ. ಆದರೆ, ನಾವು ಹತಾಶರಾಗಿಲ್ಲ. ನಾವು ಒಂದು ಕ್ಷೇತ್ರದಲ್ಲಿ ಕೂಡ ಗೆಲ್ಲಲು ವಿಫಲರಾಗಿರಬಹುದು, ಆದರೂ ಎನ್‌ಡಿಎ ಸರ್ಕಾರವನ್ನು ವಿರೋಧಿಸುವ ಕೆಲಸವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿನ ಮುಸ್ಲಿಂ ಮತಗಳನ್ನು ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ. ಆರ್‌ಜೆಡಿ ಅನ್ನು ಕೂಡ ಜನರು ತಿರಸ್ಕರಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟವು ಕೂಡ ಶೇ 50ರಷ್ಟು ಮತಗಳನ್ನು ಪಡೆಯುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.
ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷವು ಬಿಹಾರ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿದೆ. ರಾಜ್ಯದಲ್ಲಿನ ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ, ವಲಸೆಯ ಕುರಿತು ಬಾರಿ ಪ್ರಚಾರ ಮಾಡಿದರು ಕೂಡ, ಮತ ಪಡೆಯುವಲ್ಲಿ ಜನ ಸುರಾಜ್ ಪಕ್ಷವು ವಿಫಲವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.