
ನಿತೀಶ್ ಕುಮಾರ್
(ಪಿಟಿಐ ಚಿತ್ರ)
ಬಲ್ಲಿಯಾ: ಕೆಲವೇ ದಿನಗಳಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಅಧಿಕಾರದಿಂದ ಕೆಳಗಿಳಿಯಬಹುದು ಎಂದು ಸಮಾಜವಾದಿ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಬಹುಮತ ಗಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸಿಎಂ ನಿತೀಶ್ ಕುಮಾರ್ 10ನೇ ಬಾರಿಗೆ ಅಧಿಕಾರವಹಿಸಿಕೊಂಡಿದ್ದಾರೆ.
ಬಿಜೆಪಿಯ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ಗೃಹ ಖಾತೆ ನೀಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಂಡೆ, ಮುಂದಿನ ದಿನಗಳಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಸುತ್ತಿರುವ ತಂತ್ರವಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ನೀತಿಗಳು ಎಂದಿಗೂ ನಿರುದ್ಯೋಗವನ್ನು ಹೋಗಲಾಡಿಸುವ ಹಾಗೂ ಅಭಿವೃದ್ಧಿಯತ್ತ ಸಾಗುವ ಗುರಿಯನ್ನು ಹೊಂದಿಲ್ಲ. ಬಿಜೆಪಿಯ ಏಕೈಕ ಘೋಷಣೆ ಹಿಂದುತ್ವ. ಹಿಂದುತ್ವದ ಹೆಸರಿನಲ್ಲಿ ಸರ್ಕಾರವನ್ನು ನಡೆಸಲು ಹಾಗೂ ಜನರನ್ನು ದಾರಿ ತಪ್ಪಿಸಲು ಬಯಸುತ್ತಿದ್ದಾರೆ ಎಂದು ಪಾಂಡೆ ತಿಳಿಸಿದ್ದಾರೆ.
ಸಾಮ್ರಾಟ್ ಚೌಧರಿ ಅವರನ್ನು ಗೃಹ ಸಚಿವರನ್ನಾಗಿ ನೇಮಿಸುವುದು ಪಕ್ಷದ ಆಂತರಿಕ ನಿರ್ಧಾರ. ಇದು ಸಂಧಾನದ ಭಾಗವಾಗಿಯೂ ಇರಬಹುದು. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ನಿತೀಶ್ ಕುಮಾರ್ ಅವರು ಕೆಲವೇ ದಿನಗಳಲ್ಲಿ ಪದಚ್ಯುತಗೊಳ್ಳಬಹುದು ಎನ್ನಿಸುತ್ತಿದೆ ಎಂದು ಪಾಂಡೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ–ನಿತೀಶ್ ಕುಮಾರ್ ಜೋಡಿಯ ಪ್ರಭಾವಳಿಯ ನೆರವಿನಿಂದ ಎನ್‌ಡಿಎ ಮೈತ್ರಿಕೂಟವು 243 ಕ್ಷೇತ್ರಗಳ ಪೈಕಿ 203 ಸ್ಥಾನಗಳನ್ನು ಗೆದ್ದು ಬೀಗಿದೆ. ಇತ್ತ ಕಾಂಗ್ರೆಸ್–ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್’ 34 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಷ್ಟೇ ಶಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.