ADVERTISEMENT

ಬಿಲ್ಕಿಸ್‌ ಪ್ರಕರಣ; ದಾಖಲೆ ಸಲ್ಲಿಸಲು ಕೇಂದ್ರ ಸಿದ್ಧ

ಪಿಟಿಐ
Published 2 ಮೇ 2023, 16:10 IST
Last Updated 2 ಮೇ 2023, 16:10 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲು ಸಿದ್ಧ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹಾಗೂ ಗುಜರಾತ್‌ ಸರ್ಕಾರ ಮಂಗಳವಾರ ತಿಳಿಸಿವೆ.

ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದ ಗುಜರಾತ್‌ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌ ಹಾಗೂ ಬಿ.ವಿ. ನಾಗರತ್ನ ಅವರಿದ್ದ ಪೀಠವು ನಡೆಸಿತು.

‘ಯಾವ ಕಾರಣಕ್ಕಾಗಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ. ಆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಮಾರ್ಚ್‌ 27ರಂದು ನಡೆದಿದ್ದ ವಿಚಾರಣೆ ವೇಳೆ, ಕೇಂದ್ರ ಹಾಗೂ ಗುಜರಾತ್‌ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಹೇಳಿತ್ತು.

ADVERTISEMENT

‘ದಾಖಲೆಗಳನ್ನು ನೀಡದೇ ಇರುವ ಹಕ್ಕು ನಮಗೆ ಇದೆ. ಹಾಗಾಗಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಿಲ್ಲ. ನಿಮ್ಮ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಕುರಿತೂ ಚಿಂತನೆ ನಡೆಸಿದ್ದೇವೆ’ ಎಂದು ಏಪ್ರಿಲ್‌ 18ರಂದು ನಡೆದಿದ್ದ ವಿಚಾರಣೆಯಂದು ಕೇಂದ್ರ ಹಾಗೂ ಗುಜರಾತ್‌ ಸರ್ಕಾರ, ಪೀಠಕ್ಕೆ ತಿಳಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠವು, ‘ದಾಖಲೆಗಳನ್ನು ಸಲ್ಲಿಸದಿದ್ದರೆ ನ್ಯಾಯಾಂಗ ನಿಂದನೆ ಆಗಲೂಬಹುದು’ ಎಂದು ಎಚ್ಚರಿಕೆ ನೀಡಿತ್ತು.

ಮಂಗಳವಾರ ನಡೆದ ವಿಚಾರಣೆಯ ವೇಳೆ, ಕೇಂದ್ರ ಹಾಗೂ ಗುಜರಾತ್‌ ಸರ್ಕಾರಗಳ ಪರ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವುದಾಗಿ ಹೇಳಿದ್ದಾರೆ. ಜೊತೆಗೆ ಮಾರ್ಚ್‌ 27ರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದೂ ಹೇಳಿದ್ದಾರೆ.

ಮುಂದಿನ ವಿಚಾರಣೆಯನ್ನು ಜುಲೈನ ಎರಡನೇ ವಾರದಲ್ಲಿ ಮಾಡುವುದಾಗಿ ನ್ಯಾಯಾಲಯ ಹೇಳಿತು.

ರಿಟ್ ಅರ್ಜಿ ವಿಚಾರಣೆಗೆ ಅರ್ಹವೇ?:

‘ಅಪರಾಧಿಗಳನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಚಾರಣೆಗೆ ಅರ್ಹವೇ’ ಎಂದು ಸಾಲಿಸಿಟರಲ್‌ ಜನರಲ್‌ ತುಷಾರ್‌ ಮೆಹ್ತಾ ಪ್ರಶ್ನಿಸಿದರು.

‘ಈ ರಿಟ್‌ ಅರ್ಜಿಗಳನ್ನು ಸಂತ್ರಸ್ತೆ ಸಲ್ಲಿಸಿಲ್ಲ. ಮೂರನೇ ವ್ಯಕ್ತಿಗಳು ಸಲ್ಲಿಸಿದ್ದಾರೆ. ಹೀಗೆ ಮೂರನೇ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದೇ? ಇಂಥ ಅರ್ಜಿಗಳ ವಿಚಾರಣೆ ನಡೆಸುವುದು ತಪ್ಪು ಸಂಪ್ರದಾಯಕ್ಕೆ ಎಡೆ ಮಾಡಿಕೊಡುತ್ತದೆ’ ಎಂದೂ ಅಭಿಪ್ರಾಯಪಟ್ಟರು.

‘ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು. ವಜಾ ಮಾಡಿರುವುದನ್ನು ಪ್ರಶ್ನಿಸಿ ಮತ್ತೊಂದು ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ಕೇಂದ್ರ ಹಾಗೂ ಗುಜರಾತ್‌ ಸರ್ಕಾರ ವಾದಿಸಿತು.

ಯಾಕಿಷ್ಟು ತರಾತುರಿ?:

ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗಳನ್ನು ಯಾಕಿಷ್ಟು ‘ತರಾತುರಿ’ಯಲ್ಲಿ ನಡೆಸಲು ಬಯಸುತ್ತೀದ್ದೀರಿ? ಎಂದು ಅಪರಾಧಿಗಳ ಪರ ಹಾಜರಿದ್ದ ವಕೀಲರಾದ ಸಿದ್ಧಾರ್ಥ್‌ ಹಾಗೂ ರಿಷಿ ಮಲ್ಹೋತ್ರ ಅವರು ಕೇಳಿದರು. ‘ಬೇಸಿಗೆ ರಜೆ ಪ್ರಾರಂಭವಾಗುವುದಕ್ಕೂ ಮೊದಲೇ ಮುಂದಿನ ವಿಚಾರಣೆ ನಡೆಸಿ’ ಎಂದು ಕೇಳಿಕೊಂಡ ಬಿಲ್ಕಿಸ್‌ ಬಾನು ಪರ ವಕೀಲರಿಗೆ ಅಪರಾಧಿಗಳ ಪರ ವಕೀಲರು ಈ ರೀತಿ ಪ್ರಶ್ನಿಸಿದರು.

ನಾವು ವಿಚಾರಣೆ ನಡೆಸುವುದು ಇಷ್ಟವಿಲ್ಲ ಎಂದು ತೋರುತ್ತದೆ

‘ನಮ್ಮ ಪೀಠವು ರಿಟ್‌ ಅರ್ಜಿ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನಡೆಸಬಾರದು ಎನ್ನುವ ಅಭಿಪ್ರಾಯ ಅಪರಾಧಿಗಳಿಗೆ ಇದ್ದಂತಿದೆ’ ಎಂದು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌ ಹಾಗೂ ಬಿ.ವಿ. ನಾಗರತ್ನ ಅವರಿದ್ದ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

‘ಅಪರಾಧಿಗಳ ಪರ ವಕೀಲರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ನಾನು ಜೂನ್‌ 16ಕ್ಕೆ ನಿವೃತ್ತಿಯಾಗುತ್ತಿದ್ದೇನೆ. ಮೇ 19 ನನ್ನ ಕರ್ತವ್ಯದ ಕೊನೇ ದಿನ. ಈ ಕಾರಣಕ್ಕಾಗಿ ನಿಮಗೆ ಈ ಪೀಠ ಈ ಅರ್ಜಿಗಳ ವಿಚಾರಣೆ ನಡೆಸುವುದು ಇಷ್ಟವಿಲ್ಲ’ ಎಂದು ನ್ಯಾಯಮೂರ್ತಿ ಜೋಸೆಫ್‌ ಹೇಳಿದರು.

‘ಅರ್ಜಿದಾರರು ಸಲ್ಲಿಸಿರುವ ಪ್ರಮಾಣಪತ್ರಕ್ಕೆ ಪ್ರತಿ ಪ್ರಮಾಣಪತ್ರ ಸಲ್ಲಿಸಲು ನೀವು ವಿಳಂಬ ಮಾಡಿದ್ದೀರಿ. ನಮಗೆ ನೋಟಿಸ್‌ ಸಿಕ್ಕಿಲ್ಲ ಎಂದು ಕೆಲವರು ಹೇಳುತ್ತೀರಿ. ಇದಕ್ಕೆ ನೀವು ಅರ್ಜಿದಾರರ ಪರ ವಕೀಲರನ್ನು ದೂರುತ್ತೀರಿ’ ಎಂದು ಹೇಳಿದರು.

‘ನೀವು ಮೊದಲು ವಕೀಲರು. ನಿಮ್ಮ ಕರ್ತವ್ಯದ ಬಗ್ಗೆ ಪ್ರಜ್ಞೆ ಇರಲಿ. ಈ ಪ್ರಕರಣವನ್ನು ನೀವು ಗೆಲ್ಲಬಹುದು ಅಥವಾ ಸೋಲಬಹುದು. ಅದೇನೆ ಇದ್ದರೂ ಕರ್ತವ್ಯವನ್ನು ನೀವು ಮರೆಯಬಾರದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.