ADVERTISEMENT

ವಿವಿಧ ರಾಜ್ಯಗಳ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 14:36 IST
Last Updated 7 ಡಿಸೆಂಬರ್ 2022, 14:36 IST

ನವದೆಹಲಿ: ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರುವ ಉದ್ದೇಶದ ವಿವಿಧ ರಾಜ್ಯಗಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ 2022 ಅನ್ನುಬುಧವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.

ಈ ಮಸೂದೆಯು ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಕಸಿದುಕೊಳ್ಳಲಿದೆ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದವಿರೋಧ ಪಕ್ಷಗಳ ಸಂಸದರು, ಮಂಡನೆಗೂ ಮೊದಲು ಮಸೂದೆಯನ್ನು ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕು ಎಂದು ಪಟ್ಟು ಹಿಡಿದರು. ಆದರೆ, ಕೇಂದ್ರ ಸರ್ಕಾರ ಈ ಬೇಡಿಕೆಗೆ ಕಿವಿಗೊಡಲಿಲ್ಲ.

ಮಸೂದೆ ಮಂಡಿಸಿದ ಕೇಂದ್ರದ ಸಹಕಾರ ಖಾತೆ ರಾಜ್ಯ ಸಚಿವ ಬಿ.ಎಲ್‌. ವರ್ಮ ಅವರು, ಈ ಮಸೂದೆಯಿಂದ ಸಹಕಾರಿ ವಲಯದ ಆಡಳಿತ ಬಲಪಡಿಸಲು, ಚುನಾವಣಾ ಪ್ರಕ್ರಿಯೆ ಸುಧಾರಿಸಲು, ಮೇಲ್ವಿಚಾರಣಾ ಕಾರ್ಯವಿಧಾನ ಸುಧಾರಣೆಗೆ ನೆರವಾಗಲಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಘಗಳಲ್ಲಿ ನಡೆಸುವ ವ್ಯವಹಾರಗಳನ್ನು ಇದು ಸರಳಗೊಳಿಸುವ ಖಾತ್ರಿ ಇದೆ ಎಂದರು.

ADVERTISEMENT

‘ಸಹಕಾರಿ ಸಂಘಗಳು ರಾಜ್ಯ ಪಟ್ಟಿ ವಿಷಯಗಳ ವ್ಯಾಪ್ತಿಯಲ್ಲಿದೆ. ಆದರೆ, ಈ ಮಸೂದೆಯು ಕೇಂದ್ರವು ರಾಜ್ಯ ಸರ್ಕಾರಗಳ ವ್ಯಾಪ್ತಿಯನ್ನು ಅತಿಕ್ರಮಿಸುತ್ತಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಅದಕ್ಕಾಗಿಯೇ ದೇಶದಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿವೆ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾದಅಧೀರ್ ರಂಜನ್ ಚೌಧರಿ ಹೇಳಿದರು.

ಇದಕ್ಕೆ ದನಿಗೂಡಿಸಿದಡಿಎಂಕೆ ನಾಯಕ ಆರ್‌. ಬಾಲು, ಆರ್‌ಎಸ್‌ಪಿ ನಾಯಕ ಎನ್‌.ಕೆ. ಪ್ರೇಮಚಂದ್ರನ್‌, ಕಾಂಗ್ರೆಸ್‌ನ ಮನೀಶ್‌ ತಿವಾರಿ ಅವರು ‘ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವ ಈ ಮಸೂದೆಯನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಸಚಿವವರ್ಮ ಅವರು, ಈಗಾಗಲೇ ಹಲವು ತಿದ್ದುಪಡಿಗಳನ್ನು ತಂದು ಈ ಮಸೂದೆ ಮಂಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.