ADVERTISEMENT

ಲೋಕಸಭಾ ಟಿಕೆಟ್‌: ಮಹಿಳೆಯರಿಗೆ ಬಿಜೆಡಿ ಮಣೆ

ಶೇ 33ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 19:33 IST
Last Updated 10 ಮಾರ್ಚ್ 2019, 19:33 IST
ನವೀನ್ ಪಟ್ನಾಯಕ್‌
ನವೀನ್ ಪಟ್ನಾಯಕ್‌   

ಭುವನೇಶ್ವರ: ಲೋಕಸಭಾ ಚುನಾವಣೆಯಲ್ಲಿ ಶೇ 33ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವುದಾಗಿ ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಘೊಷಿಸಿದೆ.

ಕೇಂದ್ರಪಾಡಾ ಜಿಲ್ಲೆಯಲ್ಲಿ ಭಾನುವಾರ ನಡೆದ ಮಹಿಳೆಯರ ರ‍್ಯಾಲಿಯಲ್ಲಿ ಬಿಜೆಡಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಈ ಘೋಷಣೆ ಮಾಡಿದರು. ಇದರಿಂದ ದೇಶದಲ್ಲಿ ಇತಿಹಾಸ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ಜತೆಗೆ ಒಡಿಶಾ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಶೇ 33ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವ ಪಕ್ಷದ ಘೋಷಣೆ ಲೋಕಸಭಾ ಚುನಾವಣೆಗೆ ಮಾತ್ರ ಅನ್ವಯಿಸಲಿದೆ. ವಿಧಾನಸಭಾ ಚುನಾವಣೆ ಟಿಕೆಟ್‌ಗಳಿಗೆ ಸಂಬಂಧಿಸಿದಂತೆ ಪಕ್ಷ ಸ್ಪಷ್ಟ ನಿಲುವು ಪ್ರಕಟಿಸಿಲ್ಲ.

ADVERTISEMENT

21 ಲೋಕಸಭಾ ಮತ್ತು 147 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟೊಟ್ಟಿಗೆ ಚುನಾವಣೆ ನಡೆಯಲಿದೆ. ಸದ್ಯ ಬಿಜೆಡಿ ಸಂಸದರ ಪೈಕಿ ಐವರು ಮಹಿಳಾ ಸಂಸದರಿದ್ದಾರೆ. ಅದರಲ್ಲಿ ನಾಲ್ವರು ಲೋಕಸಭಾ ಸದಸ್ಯರಾದರೆ ಒಬ್ಬರು ರಾಜ್ಯಸಭಾ ಸದಸ್ಯೆ.

ಬಿಜೆಡಿ ಒಂದು ವರ್ಷದಿಂದ ಮಹಿಳೆಯರ ಪ್ರಾತಿನಿಧ್ಯದ ಬಗ್ಗೆ ಹೆಚ್ಚು ಮಾತನಾಡುತ್ತಿದೆ. ಮಹಿಳೆಯರಿಗೆ ಶೇ 33ರಷ್ಟು ರಾಜಕೀಯ ಮೀಸಲಾತಿ ನೀಡುವ ನಿರ್ಣಯ ಕೈಗೊಂಡಿತ್ತು. ಇದಕ್ಕೆ ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ಕೋರಿತ್ತು.

ರಾಜಕೀಯ ನಡೆ: ವಿಪಕ್ಷಗಳ ಟೀಕೆ
ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ನಿರ್ಧಾರವನ್ನು ’ರಾಜಕೀಯ ಕಸರತ್ತು’ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಟೀಕಿಸಿವೆ.

‘ಲೋಕಸಭೆ ಚುನಾವಣೆ ಟಿಕೆಟ್‌ನಲ್ಲಿ ಮಾತ್ರ ಮಹಿಳೆಯರಿಗೆ ಮೀಸಲು ಪ್ರಕಟಿಸಿರುವ ಬಿಜೆಡಿ ವಿಧಾನಸಭಾ ಚುನಾವಣೆ ಏಕೆ ಮೀಸಲಾತಿ ಪ್ರಕಟಿಸಿಲ್ಲ. ಇದು ಬಿಜೆಡಿ ದ್ವಿಮುಖ ನೀತಿಯ ಪ್ರತೀಕ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಟೀಕಿಸಿದ್ದಾರೆ. ಒಡಿಶಾ ಕಾಂಗ್ರೆಸ್‌ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.