ADVERTISEMENT

ಬಿಜೆಪಿ, ಅಮಿತ್‌ ಶಾ ದೇಶದ ಮಹಾಭ್ರಷ್ಟರು: ಚಂದ್ರಬಾಬು ನಾಯ್ಡು

ಏಜೆನ್ಸೀಸ್
Published 5 ಫೆಬ್ರುವರಿ 2019, 7:05 IST
Last Updated 5 ಫೆಬ್ರುವರಿ 2019, 7:05 IST
   

ನವದೆಹಲಿ: ಬಿಜೆಪಿ ಹಾಗೂ ಅದರ ಅಧ್ಯಕ್ಷ ಅಮಿತ್‌ ಶಾ ಅವರು ದೇಶದ ಅತಿದೊಡ್ಡ ಭ್ರಷ್ಟರು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹರಿಹಾಯ್ದಿದ್ದಾರೆ.

ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯ್ಡು, ‘ಭ್ರಷ್ಟಾಚಾರ ಕುರಿತಂತೆ ಬಿಜೆಪಿ ಇತರರನ್ನು ದೂರುತ್ತಿದೆ. ಆದರೆ ಆ ಪಕ್ಷ ಹಾಗೂ ಅದರ ಅಧ್ಯಕ್ಷ ಅಮಿತ್‌ ಶಾ ದೇಶದ ಮಹಾಭ್ರಷ್ಟರು. ಈ ಸರ್ಕಾರದ ಆಡಳಿತದಲ್ಲಿ ನೀರವ್‌ ಮೋದಿ ಮೆಹುಲ್‌ ಚೋಕ್ಷಿಯಂತಹವರು ಬ್ಯಾಂಕುಗಳನ್ನು ಲೂಟಿ ಮಾಡಿ ದೇಶದಿಂದ ಪಲಾಯನ ಮಾಡಿದ್ದಾರೆ. ರಫೇಲ್‌ ಹಗರಣದ ಹೊಣೆಯೂ ಅವರ(ಬಿಜೆಪಿ) ಮೇಲಿದೆ’ ಎಂದು ದೂರಿದ್ದಾರೆ.

‘ಬಿಜೆಪಿ ಅಧಿಕಾರದಲ್ಲಿದೆ. ಅದು ಎಲ್ಲ ತಪ್ಪುಗಳಿಗೂ ಬೇರೆಯವರನ್ನು ದೂರಬಾರದು. ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಿಂತಿವೆ ಎಂದು ಬಿಜೆಪಿ ಆರೋಪಿಸುತ್ತಿದೆ. ನಾವು ಮೋದಿ ವಿರೋಧ ಇಲ್ಲ. ಅವರ ಯೋಜನೆಗಳು ಹಾಗೂ ರಾಜಕೀಯ ನಡೆಯ ವಿರುದ್ಧ ನಾವಿದ್ದೇವೆ’ ಎಂದಿದ್ದಾರೆ.

ADVERTISEMENT

ಬಿಜೆಪಿ ನಾಯಕರು, ಅವರ ಆಪ್ತರ ವಿರುದ್ಧ ಇದ್ದ ಎಲ್ಲ ಪ್ರಕರಣಗಳನ್ನು ಖುಲಾಸೆಗೊಳ್ಳುತ್ತಿವೆ. ವಿರೋಧಿಗಳ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ ಎಂದೂ ದೂರಿದ ಅವರು, ‘ಇತ್ತೀಚೆಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಹಾಗೂ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದೀಗ ತೃಣಮೂಲಕ ಕಾಂಗ್ರೆಸ್‌ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಸೇಡಿನ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವಣ ಸಾಮರಸ್ಯ ನಾಶವಾಗಿದೆ. ಎಲ್ಲ ವಿರೋಧ ಪಕ್ಷಗಳ ನಾಯಕರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಬಿಜೆಪಿ ಉತ್ಸುಕವಾಗಿದೆ’ ಎಂದು ಹರಿಹಾಯ್ದರು.

ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ ನಾಯ್ಡು,‘ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಸ್ವತಂತ್ರ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ’ ಎಂದು ಕಿಡಿಕಾರಿದರು. ದೇಶದಾದ್ಯಂತ ಚಳುವಳಿ ನಡೆಸುವ ಸಲುವಾಗಿ ತೆಲುಗುದೇಶಂ ಪಕ್ಷವು ವಿವಿಧ ಪಕ್ಷಗಳನ್ನು ಸಂಘಟಿಸುತ್ತಿದೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.