ADVERTISEMENT

ಲೋಕಸಭೆ ಜತೆಗೆ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುವಂತೆ ಅಮಿತ್ ಶಾ ಪತ್ರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2018, 3:23 IST
Last Updated 14 ಆಗಸ್ಟ್ 2018, 3:23 IST
   

ನವದೆಹಲಿ: 2019ರ ಲೋಕಸಭೆ ಚುನಾವಣೆ ಜತೆಗೆ 11 ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕಾನೂನು ಆಯೋಗಕ್ಕೆ ಸಲಹೆ ನೀಡಿ 8 ಪುಟಗಳ ಪತ್ರ ಬರೆದಿದ್ದಾರೆ.

ಏಕ ಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪಕ್ಕೆ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಶಾ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ವಾದದಲ್ಲಿ ಯಾವುದೇ ಹುರುಳಿಲ್ಲ, ಈ ಪಕ್ಷಗಳ ವಾದವು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.

ಏಕಕಾಲದಲ್ಲಿ ಚುನಾವಣೆ ನಡೆಸುವುದು ಸೂಕ್ತ, ಇದರಿಂದ ವರ್ಷಪೂರ್ತಿ ಚುನಾವಣೆ ನಡೆಸುವುದು ತಪ್ಪುತ್ತದೆ ಹಾಗೇ ಹಣಕಾಸು ವೆಚ್ಚವು ಕಡಿಮೆಯಾಗುತ್ತದೆ ಎಂದು ಅಮಿತ್ ಶಾ ಪತ್ರದಲ್ಲಿ ವಿವರಿಸಿದ್ದಾರೆ. ಏಕ ಕಾಲದಲ್ಲಿ ಚುನಾವಣೆ ನಡೆಸುವುದು ಸಾಧ್ಯವಿದ್ದು ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

2016ರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ವಿವಿಧ ಚುನಾವಣೆಗಳ ಕಾರಣದಿಂದ ಅಲ್ಲಿ 307 ದಿನಗಳ ಕಾಲ ನೀತಿ ಸಂಹಿತೆ ಜಾರಿಯಲ್ಲಿತ್ತು. ಇದು ಆ ರಾಜ್ಯದ ಆಡಳಿತಕ್ಕೆ ಪ್ರತಿಕೂಲವನ್ನು ಉಂಟುಮಾಡಿತ್ತು ಎಂದು ಅಮಿತ್ ಶಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಮಿತ್ ಶಾ ಅವರ ಪತ್ರದ ಕುರಿತಂತೆ ಕೇಂದ್ರ ಸಚಿವ ಅಬ್ಬಾಸ್ ನಖ್ವಿ ಸೇರಿದಂತೆ ಬಿಜೆಪಿ ಮುಖಂಡರು ಕಾನೂನು ಆಯೋಗದ ಮುಖ್ಯಸ್ಥರಾದ ನ್ಯಾ. ಚೌಹಾಣ್ ಅವರನ್ನು ಸೋಮವಾರ ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.

2018ರಲ್ಲಿ ನಡೆಯಬೇಕಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮುಂದೂಡಿ ಅಲ್ಲಿ ಲೋಕಸಭಾ ಚುನಾವಣೆವರೆಗೂ ರಾಜ್ಯಪಾಲರ ಆಡಳಿತ ನಡೆಸುವುದು ಹಾಗೂ 2019 ಮತ್ತು 2020ರಲ್ಲಿ ನಡೆಯಬೇಕಿರುವ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು 2019ರ ಲೋಕಸಭಾ ಚುನಾವಣೆ ಜತೆಗೆ ನಡೆಸುವ ಬಗ್ಗೆ ಅಮಿತ್ ಶಾ ಸಲಹೆ ಮಾಡಿದ್ದಾರೆ.

ಮಿಜೋರಾಂ ವಿಧಾನಸಭೆ ಅವಧಿ ಡಿಸೆಂಬರ್15 (2018), ಚತ್ತೀಸ್‌ಗಢ ಜನವರಿ 5 (2019), ಮಧ್ಯ ಪ್ರದೇಶ ಜನವರಿ 7 (2019), ರಾಜಸ್ಥಾನದ ವಿದಾನಸಭೆ ಅವಧಿ ಜನವರಿ 20 (2019) ರಂದು ಮುಕ್ತಾಯವಾಗಲಿದೆ.

2019ರಲ್ಲಿಆಂಧ್ರಪ್ರದೇಶ ಜೂನ್‌ 18, ತೆಲಂಗಾಣ ಜೂನ್‌ 6, ಒಡಿಶಾ ಜೂನ್‌ 11, ಹರಿಯಾಣದಲ್ಲಿ ನವೆಂಬರ್ 20ರಂದು ವಿಧಾನಸಭೆ ಅವಧಿ ಮುಕ್ತಾಯವಾಗಲಿದೆ.

2020ರಲ್ಲಿ ಜಾರ್ಖಂಡ್ ಜನವರಿ 5, ಮಹಾರಾಷ್ಟ್ರ ನವೆಂಬರ್ 9, ಬಿಹಾರ ನವೆಂಬರ್ 29ರಂದು ವಿಧಾನಸಭೆ ಅವಧಿ ಮುಕ್ತಾಯವಾಗಲಿದೆ. ಈ ರಾಜ್ಯಗಳ ಜತೆಗೆ ರಾಜ್ಯಪಾಲರ ಆಡಳಿತ ಇರುವ ಜಮ್ಮು ಮತ್ತು ಕಾಶ್ಮೀರದ ಚುನಾವಣೆ ನಡೆಸಬಹುದು ಎಂದು ಅಮಿತ್ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.