ADVERTISEMENT

ಬಿಜೆಪಿ ಅಸ್ಸಾಂನಲ್ಲಿ ಶಾಂತಿ ಮತ್ತು ಅಭಿವೃದ್ಧಿಯನ್ನು ಖಾತ್ರಿಪಡಿಸಿದೆ: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 11:40 IST
Last Updated 22 ಮಾರ್ಚ್ 2021, 11:40 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ಜೊನೈ (ಅಸ್ಸಾಂ): ಕಳೆದ ಐದು ವರ್ಷಗಳಲ್ಲಿ ಅಸ್ಸಾಂನಲ್ಲಿ ಶಾಂತಿ ಮತ್ತು ಅಭಿವೃದ್ಧಿಯನ್ನು ಬಿಜೆಪಿ ಖಾತ್ರಿಪಡಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿಕೆ ನೀಡಿದ್ದಾರೆ.

ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಅಸ್ಥಿರತೆ ಹಾಗೂ ಹಿಂಸಾಚಾರ ಮನೆ ಮಾಡಿತ್ತು ಎಂದು ಅಮಿತ್ ಶಾ ಆರೋಪಿಸಿದರು.

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಐದು ವರ್ಷಗಳ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅಲ್ಲಿ ಪ್ರತಿಭಟನೆ, ಹಿಂಸಾಚಾರ, ಬಾಂಬ್ ಸ್ಫೋಟ ಮತ್ತು ಸಾವಿನ ಪ್ರಕರಣಗಳು ಸಾಮಾನ್ಯವಾಗಿ ಬಿಟ್ಟಿತ್ತು. ರಾಜ್ಯದ ನಾಲ್ಕು ದಿಕ್ಕಿನಲ್ಲೂ ಭಯೋತ್ಪಾದನೆ ನಡೆಯುತ್ತಿತ್ತು ಎಂದು ಆರೋಪಿಸಿದ್ದಾರೆ.

ADVERTISEMENT

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಅಸ್ಸಾಂನಲ್ಲಿ ಸತತ ಎರಡನೇ ಬಾರಿಯೂ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಪ್ರತಿಪಾದಿಸಿದರು.

ರಾಹುಲ್ ಗಾಂಧಿ ಅಸ್ಸಾಂನ 'ಹೆಮ್ಮೆ' ಮತ್ತು 'ಗುರುತು' ಅನ್ನು ರಕ್ಷಣೆ ಮಾಡುವುದಾಗಿ ಹೇಳುತ್ತಾರೆ. ಆಕಸ್ಮಿಕವಾಗಿ ಎಐಯುಡಿಎಫ್ ಅಧ್ಯಕ್ಷ ಬದ್ರೂದ್ದೀನ್ ಅಜ್ಮಲ್ ಅಧಿಕಾರಕ್ಕೆ ಬಂದರೆ ಅಸ್ಸಾಂ ನುಸುಳುಕೋರರಿಂದ ಸುರಕ್ಷಿತವಾಗಿರುತ್ತದೆಯೇ? ಮತ್ತಷ್ಟು ನುಳುಸುಕೋರರು ರಾಜ್ಯಕ್ಕೆ ಬರಬೇಕೆಂದು ಜನರು ಬಯಸುತ್ತಾರೆಯೇ ಎಂದು ಪ್ರಶ್ನಿಸಿದರು.

ರಾಜ್ಯವನ್ನು ವಿಭಜಿಸಿ ಆಳುವ ನೀತಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಶಾ ಆರೋಪಿಸಿದರು. ಆದರೆ ಬಿಜೆಪಿಯ ನೀತಿ 'ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್' ಎಂದು ಹೇಳಿದರು.

ಅಸ್ಸಾಂಮೀಸ್ ಮತ್ತು ಬಂಗಾಳಿಗಳ ನಡುವೆ ಕಾಂಗ್ರೆಸ್ ಭಿನ್ನಾಭಿಪ್ರಾಯ ಸೃಷ್ಟಿಸಿದೆ. ಕಣಿವೆ ಅಸ್ಸಾಂ ಮತ್ತು ಕೆಳಸ್ತರದ ಅಸ್ಸಾಂ ನಡುವೆ ಬಿರುಕು ಸೃಷ್ಟಿಸಿದೆ. ಬಿಜೆಪಿಯು ಅಭಿವೃದ್ಧಿಯ ಮೂಲಕ ಎಲ್ಲ ಸಣ್ಣ ಸಮುದಾಯಗಳನ್ನು ಒಗ್ಗೂಡಿಸಿದೆ ಎಂದು ಹೇಳಿದರು.

ಜನರು ಶಾಂತಿ ಹಾಗೂ ಅಭಿವೃದ್ಧಿ ಬಯಸುತ್ತಾರೆಯೇ ಎಂಬುದನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಇದು ಶಾಸಕರನ್ನು ಅಥವಾ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಚುನಾವಣೆಯಲ್ಲ. ಬದಲಾಗಿ ಅಭಿವೃದ್ಧಿ ಮುಂದುವರಿಯಲಿದೆ ಎಂಬುದನ್ನು ಖಚಿತಪಡಿಸಿಕೊಂಡು, ಅಸ್ಸಾಂನ 'ಹೆಮ್ಮೆ ಮತ್ತು ವೈಭವವನ್ನು' ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.