ADVERTISEMENT

ಬಿಜೆಪಿಯಿಂದ ರಥಯಾತ್ರೆ ಮೂಲಕ ಸಮಾಜ ವಿಭಜನೆ: ಮಮತಾ ಬ್ಯಾನರ್ಜಿ ಟೀಕೆ

ಪಿಟಿಐ
Published 10 ಫೆಬ್ರುವರಿ 2021, 10:31 IST
Last Updated 10 ಫೆಬ್ರುವರಿ 2021, 10:31 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ರಾಯಿಗಂಜ್‌(ಪಶ್ಚಿಮ ಬಂಗಾಳ): ಬಿಜೆಪಿಯ ‘ರಥಯಾತ್ರೆ’ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,‘ಬಿಜೆಪಿ ನಾಯಕರು ತಾವು ‘ದೇವರು’ ಎಂಬ ರೀತಿಯಲ್ಲಿ ರಥಯಾತ್ರೆಗಳನ್ನು ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವುದೇ ಬಿಜೆಪಿಯ ರಾಜಕೀಯ ಅಜೆಂಡಾ’ ಎಂದು ಅವರು ಕಿಡಿಕಾರಿದರು.

‘ಬಿಜೆಪಿಯು ಹಿಂದೂ ಧರ್ಮದ ಬಗ್ಗೆ ಸುಳ್ಳು ವಿಚಾರಗಳನ್ನು ಹೇಳುತ್ತಿದೆ. ರಥಯಾತ್ರೆ ಎಂಬುದು ಧಾರ್ಮಿಕ ಉತ್ಸವ. ನಾವೆಲ್ಲರೂ ಇದರಲ್ಲಿ ಭಾಗಿಯಾಗುತ್ತೇವೆ. ಭಗವಾನ್ ಜಗನ್ನಾಥ, ಬಲರಾಮ್ ಮತ್ತು ಸುಭದ್ರೆ ರಥಗಳಲ್ಲಿ ಪ್ರಯಣಿಸುತ್ತಾರೆ. ಆದರೆ ಬಿಜೆ‍ಪಿಯು ರಾಜಕೀಯಕ್ಕಾಗಿ ರಥಯಾತ್ರೆ ಮಾಡಿ, ಸಮಾಜವನ್ನು ವಿಭಜಿಸುತ್ತಿದೆ’ ಎಂದು ಅವರು ಆರೋಪಿಸಿದರು.

‘ಬಿಜೆಪಿ ನಾಯಕರು ಫೋಟೊಗಳಿಗಾಗಿ ಸ್ಥಳೀಯರ ಮನೆಗೆ ಭೇಟಿ ನೀಡಿ, ಊಟ ಮಾಡುತ್ತಾರೆ. ಹೊರಗಿನವರು ಐಷರಾಮಿ ಕಾರುಗಳಲ್ಲಿ ಬಂದು ಫೋಟೋಗಳನ್ನು ತೆಗಿಸಿಕೊಳ್ಳುತ್ತಾರೆ. ಈ ಮೂಲಕ ನಾವು ಬಡವರ ಮನೆಯಲ್ಲಿ ಊಟ ಮಾಡಿದ್ದೇವೆ ಎಂದು ತೋರಿಸಿಕೊಳ್ಳುತ್ತಾರೆ. ಆದರೆ, ಆ ಊಟವನ್ನು ಕೂಡ ಅವರು ಪಂಚತಾರಾ ಹೋಟೆಲ್‌ಗಳಿಂದ ತರಿಸಿಕೊಳ್ಳುತ್ತಾರೆ’ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.