ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆಯ ದಿನದಂದು ಎಲ್ಲ ಮಸೀದಿ ಮತ್ತು ದರ್ಗಾಗಳಲ್ಲಿ ಐದು ದೀಪಗಳನ್ನು ಬೆಳಗಿಸುವಂತೆ ಮನವೊಲಿಸಲು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯರು ಅಭಿಯಾನ ಆರಂಭಿಸಲಿದ್ದಾರೆ ಎಂದು ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕ್ಕಿ ತಿಳಿಸಿದರು.
ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ರಾಮ ಮಂದಿರದ ಉದ್ಘಾಟನೆ ಮತ್ತು ವಿಗ್ರಹ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಸೀದಿ ಮತ್ತು ದರ್ಗಾ ಸಮಿತಿ ಸದಸ್ಯರನ್ನು ಮನವೊಲಿಸಲು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರಿಗೆ ಸೂಚಿಸಲಾಗಿದೆ’ ಎಂದರು.
‘ಇದೊಂದು ಐತಿಹಾಸಿಕ ಸನ್ನಿವೇಶ. ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಯನ್ನು ನಾವೆಲ್ಲರೂ ಒಟ್ಟಾಗಿ ಸ್ವಾಗತಿಸಬೇಕಿದೆ. ದೇಶದ 140 ಕೋಟಿ ಜನರೂ ಈ ಸಂಭ್ರಮದಲ್ಲಿ ಭಾಗಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ’ ಎಂದು ಹೇಳಿದರು.
ದೇಶದ ಎಲ್ಲ ಮಸೀದಿ ಮತ್ತು ದರ್ಗಾಗಳ ಆವರಣಗಳಲ್ಲಿ ಇದೇ 14ರಿಂದ ಸ್ವಚ್ಛತಾ ಕೆಲಸಗಳನ್ನು ಆರಂಭಿಸಲಾಗುವುದು. ಸೂಫಿ ಸಂತರ ಸಭೆ, ಧಾರ್ಮಿಕ ಸಭೆಗಳನ್ನೂ ಆಯೋಜಿಸಲಾಗುವುದು. ಮಸೀದಿ ಮತ್ತು ದರ್ಗಾಗಳ ಎದುರು ಐದು ದೀಪಗಳನ್ನು ಬೆಳಗಿಸುವ ಮೂಲಕ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ಸ್ವಾಗತಿಸುವಂತೆ ಮನವಿ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.