ಕೋಲ್ಕತ್ತ: ಬಂಗಾಳಿ ಮಾತನಾಡುವ ವಲಸಿಗರ ಮೇಲಿನ ದೌರ್ಜನ್ಯ ಖಂಡಿಸಿ ತೆಗೆದುಕೊಂಡ ಗೊತ್ತುವಳಿಯು ಗುರುವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು.
ನಿರ್ಣಯದ ಮೇಲಿನ ಚರ್ಚೆಯು ಆಡಳಿತ ಪಕ್ಷ ಟಿಎಂಸಿ ಮತ್ತು ವಿರೋಧ ಪಕ್ಷ ಬಿಜೆಪಿಯ ಶಾಸಕರ ನಡುವೆ ಸಂಘರ್ಷದ ಸನ್ನಿವೇಶ ಸೃಷ್ಟಿಸಿತು. ಗೊತ್ತುವಳಿ ವಿರೋಧಿಸಿ ಗದ್ದಲ ಮುಂದುವರಿಸಿದ ಬಿಜೆಪಿಯ ಐವರು ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದರು.
ಬಿಜೆಪಿಯ ಮುಖ್ಯ ಸಚೇತಕ ಶಂಕರ್ ಘೋಷ್, ಶಾಸಕರಾದ ಅಗ್ನಿಮಿತ್ರ ಪಾಲ್, ಮಿಹಿರ್ ಗೋಸಾಮಿ, ಬಂಕಿಮ್ ಘೋಷ್, ಅಶೋಕ್ ದಿಂಡಾ ಅವರನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ಅಮಾನತುಗೊಳಿಸಿದರು. ಸದನದಿಂದ ಹೊರಗೆ ಹೋಗಲು ನಿರಾಕರಿಸಿದ ಶಂಕರ್ ಘೋಷ್ ಅವರನ್ನು ಮಾರ್ಷಲ್‌ಗಳು ಬಲವಂತಾಗಿ ಎತ್ತಿಕೊಂಡು ಹೊರಗೆ ಹಾಕಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಣಯದ ಬಗ್ಗೆ ಮಾತನಾಡಲು ಎದ್ದು ನಿಂತಾಗ, ಬಿಜೆಪಿ ಸದಸ್ಯರು ಭಾರಿ ಗದ್ದಲ ಎಬ್ಬಿಸಿ, ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನು ಸೆ.2ರಂದು ಅಮಾನತುಗೊಳಿಸಿದ್ದು ಯಾಕೆ ಎಂದು ಪ್ರಶ್ನಿಸಿ, ಚರ್ಚೆಗೆ ಅಡ್ಡಿಪಡಿಸಿದರು.
ಬಿಜೆಪಿ ಶಾಸಕರ ಘೋಷಣೆಗೆ ಪ್ರತಿಯಾಗಿ ಟಿಸಿಎಂ ಶಾಸಕರು ಘೋಷಣೆ ಕೂಗಲು ಆರಂಭಿಸಿದರು. ಇದರಿಂದ ಸದನ ಗೊಂದಲದ ಗೂಡಾಯಿತು. ಎಷ್ಟೇ ಗದ್ದಲ ಮುಂದುವರಿದರೂ ಸ್ಪೀಕರ್ ಕಲಾಪವನ್ನು ಮುಂದೂಡಲಿಲ್ಲ. ದೃಢನಿಶ್ಚಯದಿಂದ ಪ್ರಕ್ರಿಯೆಗಳನ್ನು ಮುಂದುವರಿಸಿದರು. ತಮ್ಮತ್ತ ನೀರಿನ ಬಾಟಲಿಗಳನ್ನು ಎಸೆಯಲಾಯಿತು ಎಂದು ಬಿಜೆಪಿ ಶಾಸಕರು ದೂರಿದರು.
ಮುಖ್ಯಮಂತ್ರಿ ಭಾಷಣ ಮುಗಿಯುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಬೆನ್ನಲ್ಲೇ, ಧ್ವನಿ ಮತದ ಮೂಲಕ ನಿರ್ಣಯವನ್ನು ಅಂಗೀಕರಿಸಲಾಯಿತು.
ಬಿಜೆಪಿ ಶಾಸಕರು ಉದ್ದೇಶಪೂರ್ವಕವಾಗಿಯೇ ಬಂಗಾಳಿ ವಲಸಿಗರ ವಿರುದ್ಧದ ದೌರ್ಜನ್ಯ ಖಂಡನೆ ನಿರ್ಣಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಸತ್ಯ ಹೊರಬರುವುದು ಅವರಿಗೆ ಬೇಕಿಲ್ಲಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
‘ಟಿಎಂಸಿಯ ಮೊಸಳೆ ಕಣ್ಣೀರು’
‘ಕೆಲವು ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ವಲಸಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ’ ಎಂದು ನಿರ್ಣಯ ಅಂಗೀಕರಿಸುವುದರ ಹಿಂದಿನ ಕಾರಣವೇನು ಎಂದು ಬಿಜೆಪಿ ಪ್ರಶ್ನಿಸಿದೆ. ಆಡಳಿತ ಪಕ್ಷವು ಈ ವಿಚಾರದಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಬಿಜೆಪಿ ಶಾಸಕ ಅಗ್ನಿಮಿತ್ರ ಪಾಲ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.