ADVERTISEMENT

ಲಂಡನ್‌ ಹೇಳಿಕೆ ವಿವಾದ | ರಾಹುಲ್‌ ಗಾಂಧಿ ಸದಸ್ಯತ್ವ ರದ್ದತಿಗೆ ಬಿಜೆಪಿ ಆಗ್ರಹ

ರಾಹುಲ್‌ ಹೇಳಿಕೆ ಪರಿಶೀಲಿಸಲು ಸಂಸದೀಯ ಸಮಿತಿ ರಚನೆಗೆ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2023, 5:42 IST
Last Updated 17 ಮಾರ್ಚ್ 2023, 5:42 IST
   

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಆಡಿರುವ ಮಾತುಗಳು ಭಾರತದ ‍‍ಪ್ರಜಾ‍ಪ್ರಭುತ್ವವನ್ನು ಅವಮಾನಿಸುವಂತಿದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡಲು ಸಂಸದೀಯ ಸಮಿತಿಯನ್ನು ರಚನೆ ಮಾಡಬೇಕು ಎಂದು ಬಿಜೆಪಿ ಲೋಕಸಭೆ ಸ್ಪೀಕರ್‌ ಅವರಿಗೆ ಮನವಿ ಸಲ್ಲಿಸಿದೆ.

ಅಲ್ಲದೇ ಒಂದು ವೇಳೆ ರಾಹುಲ್ ಗಾಂಧಿ ಸಂಸತ್‌ನಲ್ಲಿ ಕ್ಷಮೆ ಕೇಳದೇ ಇದ್ದರೆ, ಅವರ ಲೋಕಸಭೆ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ರಾಹುಲ್‌ ಗಾಂಧಿ ಅವರ ಹೇಳಿಕೆಯು ನಿಂದನಾತ್ಮಕವಾಗಿದ್ದು, ಹೀಗಾಗಿ ಲೋಕಸಭೆಯ ಕಾರ್ಯಕಲಾಪ ನಿಯಮ 223ರ ಅಡಿಯಲ್ಲಿ ಸಂಸದೀಯ ಸಮಿತಿ ರಚನೆ ಮಾಡಬೇಕು ಎಂದು ಬಿಜೆಪಿಯ ಸಂಸದ ನಿಶಿಕಾಂತ್‌ ದುಬೆ ಸ್ಪೀಕರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ರಾಹುಲ್‌ ಗಾಂಧಿಯವರ ಸದಸ್ಯತ್ವ ರದ್ದು ಮಾಡುವ ಬಗ್ಗೆ ಸಮಿತಿ ಪರಿಶೀಲನೆ ಮಾಡಬೇಕು ಎಂದು ಕೋರಿದ್ದಾರೆ.

ADVERTISEMENT

ಈ ಹಿಂದೆ 2008ರಲ್ಲಿ ವೋಟಿಗಾಗಿ ಕಾಸು ವಿಚಾರ ಸಂಬಂಧ ಸಂಸದೀಯ ಸಮಿತಿ ರಚನೆ ಮಾಡಲಾಗಿತ್ತು ಎಂದು ಅವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ರಾಹುಲ್‌ ಗಾಂಧಿ ಅವರ ಮಾತುಗಳು ವಿಷಪೂರಿತವಾಗಿದ್ದು, ಇದು ವ್ಯವಸ್ಥಿತವಾದ ಭಾರತ ವಿರೋಧಿ ಅಭಿಯಾನವಾಗಿದೆ. ಸಂಸತ್ತನ್ನು ಅವಮಾನಿಸುವ ಹಾಗೂ ನಿಂದಿಸುವ ಕ್ರಿಯೆಯಾಗಿದೆ ಎಂದು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.