ನವದೆಹಲಿ: ಬಿಜೆಪಿಯಲ್ಲಿ ಬಹುನಿರೀಕ್ಷಿತವಾಗಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ. ಮುಂಬರುವ ಸಂಸತ್ ಅಧಿವೇಶನಕ್ಕೆ ಮುನ್ನ ಹೊಸ ಅಧ್ಯಕ್ಷರ ಹೆಸರು ಘೋಷಣೆ ಸಾಧ್ಯತೆ ಕಡಿಮೆ.
ಪಕ್ಷವು ಅಧಿಕಾರದಲ್ಲಿರುವ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ಸೇರಿದಂತೆ ಒಂಬತ್ತು ಪ್ರಮುಖ ರಾಜ್ಯಗಳಲ್ಲಿ ಹಾಗೂ ಬಲವಾದ ನೆಲೆ ಹೊಂದಿರುವ ಕರ್ನಾಟಕದಲ್ಲಿ ಚುನಾವಣಾ ಪ್ರಕ್ರಿಯೆ ಅಪೂರ್ಣಗೊಂಡಿರುವುದು ಇದಕ್ಕೆ ಕಾರಣ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಸಲು 19 ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿರಬೇಕು ಎಂದು ಪಕ್ಷದ ಸಂವಿಧಾನದಲ್ಲಿದೆ. ಈವರೆಗೆ 27 ರಾಜ್ಯಗಳಲ್ಲಿ ಅಧ್ಯಕ್ಷರ ನೇಮಕ ಆಗಿದೆ. ತಾಂತ್ರಿಕವಾಗಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಸಲು ಸಾಧ್ಯ ಇದೆ. ಆದರೆ, ನಿರ್ಣಾಯಕ ರಾಜ್ಯಗಳಲ್ಲೇ ಬಿಕ್ಕಟ್ಟು ಬಗೆಹರಿಯದ ಕಾರಣ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಸುವುದು ಅನುಮಾನ ಎನ್ನುತ್ತಾರೆ ಪಕ್ಷದ ಹಿರಿಯ ನಾಯಕರೊಬ್ಬರು.
ಜುಲೈ ಮೊದಲ ವಾರದಲ್ಲಿ 14 ರಾಜ್ಯಗಳಲ್ಲಿ ಸಾಂಸ್ಥಿಕ ಚುನಾವಣೆಗಳು ನಡೆದವು. ಒಂದು ವಾರದಲ್ಲಿ ಈ ಪ್ರಕ್ರಿಯೆ ನಡೆಸಲಾಯಿತು. ತ್ರಿಪುರಾದಲ್ಲಿ ಮಾತ್ರ ಸ್ವಲ್ಪ ಸಮಸ್ಯೆ ಎದುರಾಗಿತ್ತು. ಕಳೆದ ಕೆಲವು ದಿನಗಳಲ್ಲಿ ಸಾಂಸ್ಥಿಕ ಚುನಾವಣೆಯ ಪ್ರಕ್ರಿಯೆಯು ಬಿರುಸಾಗಿ ನಡೆದಿದ್ದು, ಈ ಕಾರ್ಯವು ಶೀಘ್ರ ಕೊನೆಗೊಳ್ಳಲಿದೆ ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು.
ಸಾಂಸ್ಥಿಕ ಚುನಾವಣೆಯು ದೊಡ್ಡ ಪ್ರಕ್ರಿಯೆಯಾಗಿದ್ದು, 18,000ಕ್ಕೂ ಹೆಚ್ಚು ಜಿಲ್ಲಾ ಸಮಿತಿಗಳನ್ನು ಒಳಗೊಂಡಿದೆ. ದೇಶದಾದ್ಯಂತ 10 ಲಕ್ಷ ಮತಗಟ್ಟೆಗಳಲ್ಲಿ ಚುನಾವಣೆಗಳನ್ನು ನಡೆಸಲು ಪಕ್ಷವು ಶ್ರಮಿಸುತ್ತಿದೆ. 18,000 ಜಿಲ್ಲಾ ಸಮಿತಿಗಳಲ್ಲಿ 15,000 ಸಮಿತಿಗಳು ಈ ಕಾರ್ಯದಲ್ಲಿ ಭಾಗವಹಿಸಿವೆ. 7.5 ಲಕ್ಷ ಮತಗಟ್ಟೆಗಳಲ್ಲಿಯೂ ಮತದಾನ ನಡೆಸಲಾಗಿದೆ ಎಂದು ನಾಯಕರೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.