ಕೋಲ್ಕತ್ತ: ಬಿಜೆಪಿ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಮಿಕ್ ಭಟ್ಟಾಚಾರ್ಯ ಅವರು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿಜ್ಞಾನ ನಗರಿಯಲ್ಲಿ ಇಂದು (ಗುರುವಾರ) ನಡೆದ ಪಕ್ಷದ ವೇದಿಕೆ ಕಾರ್ಯಕ್ರಮದಲ್ಲಿ ಸಮಿಕ್ ಭಟ್ಟಾಚಾರ್ಯ ಅವರ ಹೆಸರನ್ನು ರವಿಶಂಕರ್ ಪ್ರಸಾದ್ ಅಧಿಕೃತವಾಗಿ ಘೋಷಣೆ ಮಾಡಿದರು. ಹಾಗೂ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಪತ್ರವನ್ನು ಅವರಿಗೆ ನೀಡಿದರು. ಬಳಿಕ ಸ್ಥಳೀಯ ಬಿಜೆಪಿ ನಾಯಕರು ಅವರನ್ನು ಸನ್ಮಾನಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಇವರೊಬ್ಬರೇ ಅರ್ಜಿ ಸಲ್ಲಿಸಿದ್ದರಿಂದ, ಆಯ್ಕೆಯೂ ಅವಿರೋಧವಾಗಿ ನಡೆಯಿತು.
ನಿರ್ಗಮಿತ ರಾಜ್ಯಾಧ್ಯಕ್ಷ ಸುಕಂತಾ ಮಜೂಮದಾರ್ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ಕೋಲ್ಕತ್ತದಲ್ಲಿರುವ ಬಿಜೆಪಿಯ ಸಾಲ್ಟ್ ಲೇಕ್ ಕಚೇರಿಗೆ ಬುಧವಾರ ಮಧ್ಯಾಹ್ನ ಭೇಟಿ ನೀಡಿದ ಸಮಿಕ್, ನಾಮಪತ್ರ ಸಲ್ಲಿಸಿದರು.
2026ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆಗೆ ಬಿಜೆಪಿ ಒತ್ತು ನೀಡಿದ್ದು, ಆ ಉದ್ದೇಶದಿಂದಲೂ ಸಮಿಕ್ ಭಟ್ಟಾಚಾರ್ಯ ಅವರ ಆಯ್ಕೆ ನಡೆದಿದೆ ಎಂದೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.