ADVERTISEMENT

ಬಿಜೆಪಿ ಕಾರ್ಯಕರ್ತನಿಗೆ ಗುಂಡಿಕ್ಕಿ ಕೊಲೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 5:05 IST
Last Updated 27 ಮೇ 2019, 5:05 IST
   

ಕೋಲ್ಕತಾ: ಬಿಜೆಪಿ ಕಾರ್ಯಕರ್ತನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಇಲ್ಲಿನ ಉತ್ತರ 24 ಪರಗಣಾಸ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಬಿಜೆಪಿ ಕಾರ್ಯಕರ್ತ ಚಂದನ್ ಷಾ ಕೊಲೆಯಾದ ವ್ಯಕ್ತಿ. ಈತನನ್ನು ನಾಲ್ಕೈದು ಮಂದಿ ಅಪರಿಚಿತರು ಶಸ್ತ್ರಧಾರಿಗಳಾಗಿ ಬಂದು ಗುಂಡಿಕ್ಕಿ ಪರಾರಿಯಾಗಿದ್ದಾರೆ. ಚಂದನ್ ಷಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರುಬಿಗಿಭದ್ರತೆ ಕೈಗೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಅಮೇಠಿಯಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ಗ್ರಾಮದ ಪ್ರಮುಖನನ್ನು ಮುಸುಕು ಧರಿಸಿದ್ದ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದರು.ಇದು ಉತ್ತರ ಭಾರತದಲ್ಲಿ ನಡೆಯುತ್ತಿರುವ ಎರಡನೆ ಘಟನೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.