ಚಂಡೀಗಢ: ಪಂಜಾಬ್‌ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಅವರ ನಿವಾಸದ ಬಳಿ ಮಂಗಳವಾರ ಮುಂಜಾನೆ ಅಪರಿಚಿತ ವ್ಯಕ್ತಿಗಳು ಗ್ರೆನೇಡ್ ಸ್ಫೋಟಿಸಿದ್ದಾರೆ.
‘ಜಲಂಧರ್ ಜಿಲ್ಲೆಯಲ್ಲಿರುವ ಕಾಲಿಯಾ ಅವರ ನಿವಾಸದಲ್ಲಿ ಸ್ಫೋಟ ಸಂಭವಿಸಿದೆ. ಮನೆಯ ಕಿಟಕಿ, ಕಾರು ಮತ್ತು ಬೈಕಿಗೆ ಹಾನಿಯಾಗಿದ್ದು, ಯಾರಿಗೂ ತೊಂದರೆಯಾಗಿಲ್ಲ. ಸ್ಫೋಟ ನಡೆದ ವೇಳೆ ಕಾಲಿಯಾ ಅದೇ ನಿವಾಸದಲ್ಲಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ‘ಪಂಜಾಬ್‌ನಲ್ಲಿ ಉದ್ವಿಗ್ನತೆ ಸೃಷ್ಟಿಸುವ ಸಲುವಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಲಾರೆನ್ಸ್ ಬಿಷ್ಣೋಯಿ ತಂಡ ಈ ಕೃತ್ಯಕ್ಕೆ ಸಂಚು ನಡೆಸಿದೆ’ ಎಂದು ಹೇಳಿದ್ದಾರೆ.
‘ಕೃತ್ಯಕ್ಕೆ ಬಳಸಿದ್ದ ಇ–ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಲಾರೆನ್ಸ್ ಬಿಷ್ಣೋಯಿ ಮತ್ತು ಪಾಕ್ ಗ್ಯಾಂಗ್‌ಸ್ಟರ್ ಶಹಝಾದ್ ಭಟ್ಟಿ ಆಪ್ತ ಝೀಶಾನ್ ಅಖ್ತರ್ ಈ ಕೃತ್ಯದ ಸಂಚು ರೂಪಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ‘ಬಾಬರ್ ಖಾಲ್ಸಾ ಇಂಟರ್‌ನ್ಯಾಷನಲ್’ಗೂ ಈ ಕೃತ್ಯದ ಜೊತೆ ನಂಟು ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಾಲಿಯಾ ಅವರು ಪಂಜಾಬ್‌ನ ಸಚಿವರಾಗಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.