ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಲಖನೌ: ಆನ್‌ಲೈನ್ ಗೇಮ್‌ಗಾಗಿ ತಂದೆಯ ಖಾತೆಯಲ್ಲಿದ್ದ ₹ 14 ಲಕ್ಷ ಹಣ ಖಾಲಿ ಮಾಡಿದ ಬಳಿಕ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಖನೌನ ಮೋಹನ್‌ಲಾಲ್‌ಗಂಜ್ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬ್ಯಾಂಕ್ ಶಾಖೆಗೆ ಭೇಟಿ ನೀಡಿದ್ದ ತಂದೆಗೆ, ಖಾತೆಯಲ್ಲಿ ಹಣ ಖಾಲಿಯಾಗಿದ್ದು ಗೊತ್ತಾಗಿದೆ. ಇದು ತಿಳಿದ ಕೂಡಲೇ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೋಹನ್‌ಲಾಲ್‌ಗಂಜ್ ಠಾಣಾಧಿಕಾರಿ ಡಿ.ಕೆ ಸಿಂಗ್ ತಿಳಿಸಿದ್ದಾರೆ.
ಆನ್‌ಲೈನ್ ಗೇಮಿಂಗ್‌ಗೆ ಹಣ ಬಳಕೆಯಾಗಿದ್ದರ ಬಗ್ಗೆ ಬ್ಯಾಂಕ್ ಪ್ರಬಂಧಕರಿಗೆ ದೂರು ನೀಡಿದ್ದ ತಂದೆ, ಆ ವಿಷಯವನ್ನು ಮನೆಯಲ್ಲಿ ತಿಳಿಸಿದ್ದಾರೆ. ಇದನ್ನು ಕೇಳಿ ಭಯಗೊಂಡ ಬಾಲಕ, ಓದುವ ನೆಪದಲ್ಲಿ ಮೇಲ್ಮಹಡಿಯಲ್ಲಿರುವ ತನ್ನ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ ಆತನ ಸಹೋದರಿ ಕೋಣೆಗೆ ಹೋದಾಗ ಕೃತ್ಯ ಎಸಗಿದ್ದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಬೊಬ್ಬೆ ಕೇಳಿ ಮೇಲ್ಮಹಡಿಗೆ ಧಾವಿಸಿದ ಪೋಷಕರಿಗೆ ಆತ್ಮಹತ್ಯೆ ವಿಷಯ ಗೊತ್ತಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಬಾಲಕ ಸಾವಿಗೀಡಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ದೇಹದ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.