ADVERTISEMENT

ಜಾಮೀನು ಷರತ್ತುಗಳ ಉಲ್ಲಂಘನೆ ಮುನ್ನೆಚ್ಚರಿಕೆ ಬಂಧನಕ್ಕೆ ಆಧಾರವಾಗದು: ನ್ಯಾಯಾಲಯ

ಪಿಟಿಐ
Published 7 ಜೂನ್ 2025, 14:11 IST
Last Updated 7 ಜೂನ್ 2025, 14:11 IST
   

ನವದೆಹಲಿ: ಆರೋಪಿಗೆ ಮಂಜೂರಾಗಿರುವ ಜಾಮೀನು ರದ್ದುಗೊಳಿಸುವುದಕ್ಕೆ ಷರತ್ತುಗಳ ಉಲ್ಲಂಘನೆಯು ಆಧಾರವಾಗಬಹುದು. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಆರೋಪಿಯನ್ನು ಬಂಧಿಸುವುದಕ್ಕೆ  ಇದು ಆಧಾರ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಯಾವುದೇ ಆರೋಪಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುವ ಕುರಿತ ಅವಕಾಶವು ಸರ್ಕಾರದ ಕೈಯಲ್ಲಿನ ಅಸಾಧಾರಣ ಅಧಿಕಾರ. ಈ ಅಧಿಕಾರವನ್ನು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್‌ ಹಾಗೂ ಮನಮೋಹನ್ ಅವರಿದ್ದ ನ್ಯಾಯಪೀಠ, ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

ADVERTISEMENT

ರಾಜೇಶ್‌ ಅವರನ್ನು, ಕೇರಳ ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ,2007ರ ಸೆಕ್ಷನ್3ರ ಅಡಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿತ್ತು. ಈ ಕ್ರಮವನ್ನು ಎತ್ತಿ ಹಿಡಿದು ಕೇರಳ ಹೈಕೋರ್ಟ್‌ ಕಳೆದ ವರ್ಷ ಸೆಪ್ಟೆಂಬರ್ 4ರಂದು ಆದೇಶಿಸಿತ್ತು. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ರಾಜೇಶ್ ಅವರ ಪತ್ನಿ ಧನ್ಯಾ ಎಂ. ಮೇಲ್ಮನವಿ ಸಲ್ಲಿಸಿದ್ದಾರೆ.

‘ಅಪರಾಧ ಕೃತ್ಯಗಳು ಸಂಭವಿಸಬಹುದು ಎಂಬ ನಿರೀಕ್ಷೆಯಿಂದ ಯಾವುದೇ ವ್ಯಕ್ತಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದಲ್ಲಿ ಅದು ಆತನ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಂತಾಗುವುದು. ಕಾನೂನಿನಲ್ಲಿನ ಈ ಅವಕಾಶವನ್ನು ಸಾಮಾನ್ಯ ಸಂದರ್ಭಗಳಲ್ಲಿ ಬಳಕೆ ಮಾಡಬಾರದು’ ಎಂದು ಪೀಠವು, ಜೂನ್‌ 6ರಂದು ಪ್ರಕಟಿಸಿರುವ 12 ಪುಟಗಳ ತೀರ್ಪಿನಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.