ADVERTISEMENT

ಲೋಕಸಭೆ ಚುನಾವಣೆ ಚರ್ಚೆ: ಅಮಿತ್‌ ಶಾ ಭೇಟಿ ಮಾಡಿದ ಯಡಿಯೂರಪ್ಪ

‘ಬೆಂಗಳೂರು– ಶಿವಮೊಗ್ಗ ನಡುವೆ ನೂತನ ಎಕ್ಸ್‌ಪ್ರೆಸ್ ರೈಲಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 20:00 IST
Last Updated 28 ಡಿಸೆಂಬರ್ 2018, 20:00 IST
   

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಕುರಿತು ವರಿಷ್ಠರ ಜೊತೆ ಚರ್ಚಿಸುವ ನಿಟ್ಟಿನಲ್ಲಿ ಶುಕ್ರವಾರ ನವದೆಹಲಿಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜೊತೆ ಮಾತುಕತೆ ನಡೆಸಿದರು.

ಮುಂದಿನ ತಿಂಗಳು 11 ಮತ್ತು 12ರಂದು ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಕುರಿತು ಶಾ ಅವರ ಜೊತೆ ಚರ್ಚಿಸಲಾಯಿತು. ಲೋಕಸಭೆ ಚುನಾವಣೆಗೆ ಸನ್ನದ್ಧಗೊಳ್ಳುವ ಕುರಿತೂ ಮಾತುಕತೆ ನಡೆಸಲಾಯಿತು. ಆದರೆ, ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿಲ್ಲ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

‘ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ನಾನು ಸಂಪರ್ಕಿಸಿಲ್ಲ. ಅವರು ಎಲ್ಲಿದ್ದಾರೆ ಎಂಬುದೂ ನನಗೆ ಗೊತ್ತಿಲ್ಲ. ಬಿಜೆಪಿಯು ರಾಜ್ಯದಲ್ಲಿ ಸರ್ಕಾರ ರಚಿಸುವ ಪ್ರಯತ್ನ ಮಾಡುತ್ತಿಲ್ಲ. ನಾವು ವಿರೋಧ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡುತ್ತೇವೆ’ ಎಂದು ಅವರು ಪುನರುಚ್ಚರಿಸಿದರು.

ADVERTISEMENT

‘15 ಅತೃಪ್ತ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದರೆ ಮಾತ್ರ ಸರ್ಕಾರ ರಚಿಸಬಹುದು. ಈಗ ರಾಜೀನಾಮೆ ನೀಡಿದರೂ ಲೋಕಸಭೆ ಚುನಾವಣೆಯೊಂದಿಗೆ ಉಪ ಚುನಾವಣೆ ಎದುರಿಸಬೇಕಾಗುತ್ತದೆ ಎಂಬುದು ಅವರಿಗೂ ಗೊತ್ತು. ಬಿಜೆಪಿಯು ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ಹೊಸ ರೈಲಿಗೆ ಬೇಡಿಕೆ
‘ಬೆಂಗಳೂರು– ಶಿವಮೊಗ್ಗ ನಡುವೆ ನೂತನ ಎಕ್ಸ್‌ಪ್ರೆಸ್ ರೈಲಿಗೆ ಬೇಡಿಕೆ ಸಲ್ಲಿಸುವ ನಿಟ್ಟಿನಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ’ ಎಂದು ಅವರು ಹೇಳಿದರು.

ಶಿವಮೊಗ್ಗ– ಶಿಕಾರಿಪುರ– ರಾಣೆಬೆನ್ನೂರು, ಶೃಂಗೇರಿ– ಶಿವಮೊಗ್ಗ– ಮಂಗಳೂರು ನಡುವೆ ಹೊಸ ಮಾರ್ಗ ಮತ್ತು ಶಿವಮೊಗ್ಗ– ಬೀರೂರು ಮಾರ್ಗದ ಡಬ್ಲಿಂಗ್ ಕಾಮಗಾರಿ, ಬೈಂದೂರು– ಕುಮಸಿ ರೈಲು ನಿಲ್ದಾಣಗಳ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಪಕ್ಷದ ದಕ್ಷಿಣ ರಾಜ್ಯಗಳ ಅಧ್ಯಕ್ಷರ ಸಭೆ ಆಯೋಜಿಸಿದ್ದ ಹೈಕಮಾಂಡ್‌, ನಂತರ ಕಾರಣಾಂತರಗಳಿಂದ ಅದನ್ನು ಮುಂದೂಡಿತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.