ADVERTISEMENT

ಸಿಎಎ ಪರ ಬ್ಯಾಟಿಂಗ್: ಮುಸ್ಲಿಮರಿಗೆ ತೊಂದರೆಯಾಗುವುದಿಲ್ಲ ಎಂದ ರಜನಿಕಾಂತ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 8:43 IST
Last Updated 5 ಫೆಬ್ರುವರಿ 2020, 8:43 IST
ನಟ ರಜನಿಕಾಂತ್
ನಟ ರಜನಿಕಾಂತ್   

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆಯು ಮುಸ್ಲಿಮರಿಗೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲ ಮತ್ತು ಒಂದು ವೇಳೆ ಮುಸ್ಲಿಮರಿಗೆ ಇದರಿಂದ ತೊಂದರೆಯಾದರೆ ಅದರ ವಿರುದ್ಧ ಮೊದಲು ನಾನೇ ಧ್ವನಿ ಎತ್ತುತ್ತೇನೆ ಎಂದು ಸೂಪರ್‌ಸ್ಟಾರ್ ರಜನಿಕಾಂತ್‌ ಸಿಎಎ ಪರ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಸಿಎಎ ಬಗೆಗಿನ ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ಅವರು, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪ್ರಕ್ರಿಯೆ ಕೂಡ ಅಗತ್ಯವಿದೆ ಎಂದು ಹೇಳಿದ್ದಾರೆ.

ಸಿಎಎಯಿಂದ ಮುಸ್ಲಿಮರಿಗೆ ತೊಂದರೆಯಾಗುವುದಿಲ್ಲ. ಅವರಿಗೆ ತೊಂದರೆಯಾದರೆ ಅದರ ವಿರುದ್ಧ ಧ್ವನಿ ಎತ್ತುವವರಲ್ಲಿ ನಾನೇ ಮೊದಲಿಗನಾಗಿರುವೆ ಎಂದುಇದೇ ವೇಳೆ ತಿಳಿಸಿದ್ದಾರೆ.

ADVERTISEMENT

ದೇಶ ವಿಭಜನೆಯ ನಂತರ ಭಾರತದಲ್ಲೇ ಉಳಿಯಲು ನಿರ್ಧರಿಸಿದ ಮುಸ್ಲಿಮರನ್ನು ಹೇಗೆ ದೇಶದಿಂದ ಹೊರಕಳುಹಿಸಲಾಗುತ್ತದೆ? ವಿದ್ಯಾರ್ಥಿಗಳು ಮೊದಲಿಗೆ ತಮ್ಮ ಪ್ರೊಫೆಸರ್‌ಗಳೊಂದಿಗೆ ವಿಚಾರವನ್ನು ವಿಶ್ಲೇಷಿಸಿ ಮತ್ತು ಚರ್ಚಿಸಿ ಪ್ರತಿಭಟನೆಯನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ದೇಶದ ವಿವಿಧೆಡೆ ನಡೆದ ಹಿಂಸಾಚಾರದ ಕುರಿತು ಮಾತನಾಡಿದ್ದ ಅವರು, ಹಿಂಸಾಚಾರ ಮತ್ತು ಗಲಭೆಯು ಯಾವುದೇ ಸಮಸ್ಯೆ ಪರಿಹಾರ ಕಂಡುಕೊಳ್ಳಲು ದಾರಿಯಾಗಿರುವುದಿಲ್ಲ. ಪರಿಹಾರ ಕಂಡುಕೊಳ್ಳಲು ಹಿಂಸಾಚಾರ ಮತ್ತು ಗಲಭೆಗಳು ದಾರಿ ಮಾಡಿಕೊಡುವುದಿಲ್ಲ. ದೇಶದ ಭದ್ರತೆ ಮತ್ತು ಕಲ್ಯಾಣವನ್ನು ಮನಸ್ಸಿನಲ್ಲಿಟ್ಟುಕೊಂಡು ಎಲ್ಲರೂ ಒಗ್ಗಟ್ಟಾಗಿರುವಂತೆ ದೇಶದ ಜನರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದರು.

ನೂತನ ಪಕ್ಷ ಸ್ಥಾಪನೆ ಕುರಿತು ಘೋಷಣೆ ಮಾಡಿರುವ 69 ವರ್ಷದ ನಟ, ತಮಿಳುನಾಡು ರಾಜಕೀಯವನ್ನು ಗಮನದಲ್ಲಿಟ್ಟುಕೊಂಡು ಲೋಕಸಭಾ ಚುನಾವಣೆಯಿಂದ ದೂರವುಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.