ADVERTISEMENT

ಸುದೀರ್ಘ ಅವಧಿಗೆ ರೈಲ್ವೆ ಭೂಮಿ ಗುತ್ತಿಗೆ ನೀಡುವ ನೀತಿಗೆ ಕೇಂದ್ರ ಒಪ್ಪಿಗೆ

ಪಿಟಿಐ
Published 7 ಸೆಪ್ಟೆಂಬರ್ 2022, 12:18 IST
Last Updated 7 ಸೆಪ್ಟೆಂಬರ್ 2022, 12:18 IST
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಹಾಗೂ ಅನುರಾಗ್‌ ಠಾಕೂರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು–ಪಿಟಿಐ ಚಿತ್ರ 
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಹಾಗೂ ಅನುರಾಗ್‌ ಠಾಕೂರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು–ಪಿಟಿಐ ಚಿತ್ರ    

ನವದೆಹಲಿ:ಪ್ರಧಾನ ಮಂತ್ರಿ ಗತಿ ಶಕ್ತಿ ಕಾರ್ಯಕ್ರಮಕ್ಕಾಗಿ ರೈಲ್ವೆ ಭೂಮಿಯನ್ನು ಸುದೀರ್ಘ ಅವಧಿಗೆ ಗುತ್ತಿಗೆ ನೀಡುವ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬುಧವಾರ ಒಪ್ಪಿಗೆ ದೊರೆತಿದೆ.

ದೇಶದ ವಿವಿಧೆಡೆ300 ‘ಕಾರ್ಗೊ ಟರ್ಮಿನಲ್‌’ಗಳನ್ನು ನಿರ್ಮಿಸುವ ಮೂಲಕ 1.25 ಲಕ್ಷ ಉದ್ಯೋಗ ಸೃಷ್ಟಿಸಲು ಇದರಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

‘ಸದ್ಯ 5 ವರ್ಷದವರೆಗೆ ಭೂಮಿ ಗುತ್ತಿಗೆ ನೀಡುವ ವ್ಯವಸ್ಥೆ ಇತ್ತು. ಹೊಸ ನೀತಿಯ ಪ್ರಕಾರ ರೈಲ್ವೆ ಭೂಮಿಯನ್ನು 35 ವರ್ಷದವರೆಗೂ ಗುತ್ತಿಗೆ ಪಡೆಯಬಹುದಾಗಿದೆ’ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ADVERTISEMENT

‘ಮುಂದಿನ ಐದು ವರ್ಷಗಳಲ್ಲಿ 300 ಕಾರ್ಗೊ ಟರ್ಮಿನಲ್‌ಗಳನ್ನು ನಿರ್ಮಿಸುವ ಹಾಗೂ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಈ ನೀತಿಯಿಂದ ರೈಲ್ವೆ ಇಲಾಖೆಗೂ ಹೆಚ್ಚು ಆದಾಯ ದೊರೆಯಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

ಪಿ.ಎಂ–ಶ್ರೀ ಶಾಲೆಗಳ ನಿರ್ಮಾಣಕ್ಕೆ₹27,360 ಕೋಟಿ:ಪಿ.ಎಂ–ಶ್ರೀ ಯೋಜನೆಯಡಿ ದೇಶದಲ್ಲಿ 14 ಸಾವಿರಕ್ಕೂ ಅಧಿಕ ಶಾಲೆಗಳ ನಿರ್ಮಾಣಕ್ಕೆ ಒಟ್ಟು₹27,360 ಕೋಟಿ ಅನುದಾನ ಒದಗಿಸಲೂ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಹಾಗೂ ಅನುರಾಗ್‌ ಠಾಕೂರ್‌, ‘ಈ ಯೋಜನೆಯಡಿ ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳನ್ನು ಬಲಪಡಿಸಲಾಗುತ್ತದೆ. ಐದು ವರ್ಷಗಳಲ್ಲಿ ನಿಗದಿತ ಸಂಖ್ಯೆಯ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಇದಕ್ಕೆ₹27,360 ಕೋಟಿ ವೆಚ್ಚವಾಗಲಿದೆ. ಈ ಪೈಕಿ ಕೇಂದ್ರ ಸರ್ಕಾರವು ₹18,128 ಕೋಟಿ ಭರಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಶಿಕ್ಷಕರ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಘೋಷಿಸಿದ್ದರು. ಇದರಿಂದ 1.87 ಲಕ್ಷವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.