ADVERTISEMENT

ಪತ್ನಿ ಜೊತೆ ಜಗಳ: ಆತ್ಮಹತ್ಯೆ ಯೋಚನೆಯಲ್ಲಿದ್ದವನ ಜೀವ ಉಳಿಸಿತು ಫೋನ್‌ ಕರೆ!

ಮಾಹಿತಿ ನೀಡಿದ ಫೇಸ್‌ಬುಕ್‌ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 15:08 IST
Last Updated 9 ಆಗಸ್ಟ್ 2020, 15:08 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಪತ್ನಿ ಜೊತೆ ಜಗಳವಾಡಿ ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದ ವ್ಯಕ್ತಿಯೊಬ್ಬರ ಜೀವವನ್ನು ಐರ್ಲೆಂಡ್‌ನಿಂದ ಬಂದ ಕರೆಯೊಂದು ರಕ್ಷಿಸಿದೆ.

ಶನಿವಾರ ಸಂಜೆ 7.51ರ ವೇಳೆಗೆ ದೆಹಲಿ ಪೊಲೀಸ್‌ ಸೈಬರ್‌ ಸೆಲ್‌ ವಿಭಾಗದ ಉಪ ಪೊಲೀಸ್‌ ಆಯುಕ್ತರಾದ ಅನ್ಯೇಷ್‌ ರಾಯ್‌ ಅವರಿಗೆ ಐರ್ಲೆಂಡ್‌ನಲ್ಲಿರುವ ಫೇಸ್‌ಬುಕ್‌ನ ಅಧಿಕಾರಿಯೊಬ್ಬರು ಕರೆ ಮಾಡಿದ್ದರು. ‘ದೆಹಲಿ ಮೂಲದ ಮೊಬೈಲ್‌ ನಂಬರ್‌ ಇರುವ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತ ಮನಃಸ್ಥಿತಿಯ ಚಟುವಟಿಕೆಯಲ್ಲಿ ತೊಡಗಿರುವುದಾಗಿ’ ಫೇಸ್‌ಬುಕ್‌ ಅಧಿಕಾರಿ ಮಾಹಿತಿ ನೀಡಿದ್ದರು. ಜೊತೆಗೆ ಆ ಮಹಿಳೆಯ ಖಾತೆ ವಿವರ ಹಾಗೂ ಮೊಬೈಲ್‌ ಸಂಖ್ಯೆಯನ್ನು ರಾಯ್‌ ಇಮೇಲ್‌ಗೆ ಕಳುಹಿಸಿದ್ದರು.

ನೇರವಾಗಿ ಮಹಿಳೆಯ ಮೊಬೈಲ್‌ಗೆ ಕರೆ ಮಾಡುವ ಬದಲು, ರಾಯ್ ಅವರು‌ ದೆಹಲಿಯಲ್ಲಿ ಮಹಿಳೆಯ ವಿಳಾಸ ಪತ್ತೆ ಹಚ್ಚಿ, ಮೊಬೈಲ್‌ ಸಂಖ್ಯೆಯಿರುವ ಪ್ರದೇಶಕ್ಕೆ ಹೋಲಿಸಿದಾಗ ಸಾಮ್ಯತೆ ಕಂಡುಬಂದಿತ್ತು. ತಕ್ಷಣದಲ್ಲೇ ಪೂರ್ವ ದೆಹಲಿ ಉಪ ಪೊಲೀಸ್‌ ಆಯುಕ್ತ ಜಸ್ಮೀತ್‌ ಸಿಂಗ್‌ ಅವರಿಗೆ ರಾಯ್‌ ಮಾಹಿತಿ ರವಾನಿಸಿದ್ದರು. ಸಿಂಗ್‌, ಸ್ಥಳೀಯ ಪೊಲೀಸರನ್ನು ಆಕೆಯ ನಿವಾಸಕ್ಕೆ ಕಳುಹಿಸಿದ್ದರು.

ADVERTISEMENT

ಮನೆಯಲ್ಲಿದ್ದ ಮಹಿಳೆ ಮೊಬೈಲ್‌ ಸಂಖ್ಯೆ ತನ್ನದೆಂದು ಹೇಳಿದ್ದರು. ಆದರೆ ತನ್ನ ಹೆಸರಿನಲ್ಲಿ ಇರುವ ಖಾತೆಯನ್ನು ಗಂಡ ರಾಜೇಶ್‌ ಉಪಯೋಗಿಸುತ್ತಿರುವುದಾಗಿ ಮಾಹಿತಿ ನೀಡಿದ್ದರು. ರಾಜೇಶ್‌ ಎಲ್ಲಿದ್ದಾರೆ ಎಂದು ಪೊಲೀಸರು ಪ್ರಶ್ನಿಸಿದ ಸಂದರ್ಭದಲ್ಲಿ ತನ್ನೊಂದಿಗೆ ಜಗಳವಾದ ನಂತರ ಅವರು ಮುಂಬೈಗೆ ತೆರಳಿದ್ದಾರೆ. ಅಲ್ಲಿ ಬಾಣಸಿಗನಾಗಿ ಹೋಟೆಲ್‌ನಲ್ಲಿ ದುಡಿಯುತ್ತಿದ್ದಾರೆ ಎಂದು ಆಕೆ ತಿಳಿಸಿದ್ದಳು. ರಾಜೇಶ್‌ ವಿಳಾಸ ಇಲ್ಲದೇ ಇದ್ದ ಕಾರಣ, ಅವರ ಮೊಬೈಲ್‌ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದರು.

ಸಿಂಗ್‌ ಅವರು ಈ ಮಾಹಿತಿಯನ್ನು ರಾಯ್‌ಗೆ ತಕ್ಷಣದಲ್ಲೇ ತಿಳಿಸಿದರು. ರಾಯ್‌, ಮುಂಬೈನಲ್ಲಿರುವ ಸೈಬರ್‌ ಸೆಲ್‌ಗೆ ಕರೆ ಮಾಡಿ ರಾಜೇಶ್‌ನನ್ನು ಪತ್ತೆ ಹಚ್ಚುವಂತೆ ತಿಳಿಸಿದ್ದರು. ಆದರೆ ರಾಜೇಶ್‌ ಫೋನ್‌ ಆಫ್‌ ಮಾಡಿದ್ದರು. ಹೀಗಿದ್ದರೂ ನಿರಂತರವಾಗಿ ಆತನನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಒಂದು ಬಾರಿ ಆತ ಫೋನ್‌ ಆನ್‌ ಮಾಡಿದ ಸಂದರ್ಭದಲ್ಲಿ ಆತನ ಜೊತೆ ಸಂಪರ್ಕ ಸಾಧಿಸಿದರು.

‘ರಾಜೇಶ್‌ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ನಾವು ಅವರಿಗೆ ಕೌನ್ಸಲಿಂಗ್‌ ಮಾಡಿದ್ದು, ಹಲವು ಇಲಾಖೆಗಳ ಸಮನ್ವಯತೆ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.