ADVERTISEMENT

ಧರ್ಮಶಾಲಾ: ಪ್ರವಾಹದಲ್ಲಿ ಮುಳುಗಿದ ಕಟ್ಟಡಗಳು, ತೇಲಿದ ಕಾರುಗಳು

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ

ಪಿಟಿಐ
Published 12 ಜುಲೈ 2021, 12:00 IST
Last Updated 12 ಜುಲೈ 2021, 12:00 IST
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೋಮವಾರ ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿರುವ ವಾಹನಗಳು –ಪಿಟಿಐ ಚಿತ್ರ
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೋಮವಾರ ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿರುವ ವಾಹನಗಳು –ಪಿಟಿಐ ಚಿತ್ರ   

ಧರ್ಮಶಾಲಾ (ಹಿಮಾಚಲ ಪ್ರದೇಶ): ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ಇಲ್ಲಿನ ಧರ್ಮಶಾಲಾದ ಪ್ರವಾಸಿ ತಾಣಗಳಲ್ಲಿರುವ ಹಲವು ಕಟ್ಟಡಗಳು ಮುಳುಗಿದ್ದು, ಕಾರುಗಳು ತೇಲಿಕೊಂಡು ಹೋಗಿವೆ. ಪ್ರತಿಕೂಲ ಹವಾಮಾನದ ಕಾರಣಕ್ಕಾಗಿ ಇಲ್ಲಿನ ವಿಮಾನ ನಿಲ್ದಾಣವನ್ನೂ ಮುಚ್ಚಲಾಗಿದೆ.

ಮೆಕ್ಲೊಡ್‌ಗಂಜ್ ಪ್ರದೇಶದ ಧರ್ಮಶಾಲಾದ ಮೇಲ್ಭಾಗದಲ್ಲಿರುವ ಭಗ್ಸು ನಾಗ್ ಬಳಿ ಇರುವ ಚರಂಡಿಯು ಪ್ರವಾಹದಿಂದಾಗಿ ತನ್ನ ಹಾದಿಯನ್ನು ಬದಲಿಸಿದೆ. ಪ್ರವಾಹದಲ್ಲಿ ನಾಲ್ಕು ಕಾರುಗಳು ಸೇರಿದಂತೆ ಹಲವು ದ್ವಿಚಕದ್ರ ವಾಹನಗಳು ತೇಲಿಕೊಂಡು ಹೋಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.

ಭಗ್ಸುನಾಗ್‌ನಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡವೂ ಹಾನಿಗೀಡಾಗಿದ್ದು, ಅದರ ಅಕ್ಕಪಕ್ಕದ ಹೋಟೆಲ್‌ಗಳು ಪ್ರವಾಹದಲ್ಲಿ ಮುಳುಗಿವೆ. ಧರ್ಮಶಾಲಾ ಪಕ್ಕದ ಮಾಂಜ್ಹಿ ಖಾದ್ ಪ್ರದೇಶದಲ್ಲಿ ಪ್ರವಾಹದಿಂದಾಗಿ, ಎರಡು ಕಟ್ಟಡಗಳು ಕೊಚ್ಚಿ ಹೋಗಿದ್ದು, ಇನ್ನೂ ಹಲವು ಕಟ್ಟಡಗಳು ಹಾನಿಗೀಡಾಗಿವೆ ಎಂದು ವರದಿಯಾಗಿದೆ.

ADVERTISEMENT

ವಿಮಾನ ರದ್ದು: ‘ಪ್ರತಿಕೂಲ ಹವಾಮಾನ ಮತ್ತು ಭಾರಿ ಮಳೆಯ ಕಾರಣಕ್ಕಾಗಿ ಧರ್ಮಶಾಲಾದ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಎಲ್ಲ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ’ ಎಂದು ವಿಮಾನ ನಿಲ್ದಾಣದ ಸಂಚಾರ ಉಸ್ತುವಾರಿ ಅಧಿಕಾರಿ ಗೌರವ ಕುಮಾರ್ ತಿಳಿಸಿದ್ದಾರೆ.

ಸೇತುವೆಗೆ ಹಾನಿ: ಪ್ರವಾಹದಿಂದಾಗಿ ಮಂಡಿ-ಪಠಾಣ್‌ಕೋಟ್ ಹೆದ್ದಾರಿಯಲ್ಲಿ ಸೇತುವೆಯೊಂದು ಹಾನಿಗೊಳಗಾಗಿದ್ದು, ಸೇತುವೆಯ ಎರಡೂ ಬದಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

‘ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸ್ಥಳೀಯರು ಮತ್ತು ಪ್ರವಾಸಿಗರು ನದಿ ತೀರಗಳ ಬಳಿ ತೆರಳಬಾರದು’ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಮನವಿ ಮಾಡಿದ್ದಾರೆ.

‘ಭೂಕುಸಿತಕ್ಕೆ ಒಳಗಾಗುವ ಸೂಕ್ಷ್ಮ ಸ್ಥಳಗಳಿಗೆ ಹೋಗದಂತೆ ಜನರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದ್ದ ಕೆಲವು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ನಿಪುನ್ ಜಿಂದಾಲ್ ತಿಳಿಸಿದ್ದಾರೆ.

ಭಾರಿ ಮಳೆ ಸಾಧ್ಯತೆ: ‘ಜುಲೈ 13 ಹಾಗೂ ಜುಲೈ 14ರಿಂದ 16ರವರೆಗೆ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸೂಚನೆ ಇದೆ ಎಂದು ಹವಾಮಾನ ಇಲಾಖೆಯ ವರದಿಯು ಮುನ್ಸೂಚನೆ ನೀಡಿದೆ’ ಎಂದೂ ಜಿಂದಾಲ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.