ಸಿಜೆಐ ಸಂಜೀವ್ ಖನ್ನಾ
ನವದೆಹಲಿ: ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಲ್ಲಿ ನೋಟಿನ ಕಂತೆಗಳು ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಆರೋಪದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಸಮಿತಿಯು, ಆರೋಪಗಳು ನಿಜ ಎಂದು ತನ್ನ ವರದಿಯಲ್ಲಿ ಹೇಳಿದೆ ಎನ್ನಲಾಗಿದೆ.
ವರದಿಯಲ್ಲಿ ಇರುವ ಅಂಶಗಳನ್ನು ಉಲ್ಲೇಖಿಸಿ, ನ್ಯಾಯಮೂರ್ತಿ ಸ್ಥಾನದಿಂದ ಕೆಳಗಿಳಿಯುವಂತೆ ವರ್ಮಾ ಅವರಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಹಜ ನ್ಯಾಯದ ತತ್ವವನ್ನು ಪಾಲಿಸಿರುವ ಸಿಜೆಐ, ವರದಿಯ ಪ್ರತಿಯನ್ನು ನ್ಯಾಯಮೂರ್ತಿ ವರ್ಮಾ ಅವರಿಗೆ ರವಾನಿಸಿದ್ದು, ಪ್ರತಿಕ್ರಿಯೆ ಕೊಡುವಂತೆ ಹೇಳಿದ್ದಾರೆ.
ಮೂವರು ಸದಸ್ಯರು ಇರುವ ಸಮಿತಿಯು ತನ್ನ ವರದಿಯನ್ನು ಸಿಜೆಐ ಅವರಿಗೆ ಈಚೆಗೆ ಸಲ್ಲಿಸಿದೆ. ಸಾಕ್ಷ್ಯಗಳನ್ನು ಪರಿಶೀಲಿಸಿರುವ ಸಮಿತಿಯು, 50ಕ್ಕೂ ಹೆಚ್ಚು ಮಂದಿಯಿಂದ ಹೇಳಿಕೆ ಪಡೆದುಕೊಂಡಿದೆ. ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರ ಮತ್ತು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥರ ಹೇಳಿಕೆಗಳನ್ನೂ ಸಮಿತಿಯು ಪಡೆದುಕೊಂಡಿದೆ.
ವರ್ಮಾ ಅವರ ನಿವಾಸದಲ್ಲಿ ಮಾರ್ಚ್ 14ರ ರಾತ್ರಿ 11.35ರ ವೇಳೆಗೆ ಬೆಂಕಿ ಕಾಣಿಸಿಕೊಂಡಾಗ ಅಲ್ಲಿಗೆ ಮೊದಲು ಧಾವಿಸಿದ್ದವರಲ್ಲಿ ಈ ಇಬ್ಬರು ಕೂಡ ಸೇರಿದ್ದಾರೆ. ವರ್ಮಾ ಅವರು ಆ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಆಗಿದ್ದರು.
ಬೆಂಕಿ ಕಾಣಿಸಿಕೊಂಡಾಗ ವರ್ಮಾ ಅವರ ಅಧಿಕೃತ ನಿವಾಸದ ಕೊಠಡಿಯೊಂದರಲ್ಲಿ ಭಾರಿ ಪ್ರಮಾಣದ ನೋಟಿನ ಕಂತೆಗಳು ಸಿಕ್ಕವು ಎಂಬ ಆರೋಪವನ್ನು ಖಚಿತಪಡಿಸುವ ಸ್ಪಷ್ಟ ಸಾಕ್ಷ್ಯಗಳು ಸಮಿತಿಗೆ ದೊರೆತಿವೆ ಎಂದು ಮೂಲಗಳು ತಿಳಿಸಿವೆ. ವರ್ಮಾ ಅವರು ನೋಟಿನ ಕಂತೆಗಳು ಸಿಕ್ಕ ಆರೋಪವನ್ನು ನಿರಾಕರಿಸಿದ್ದಾರೆ.
ಸಿಜೆಐ ಖನ್ನಾ ಅವರು ವರದಿಯಲ್ಲಿರುವ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ (ಹಿರಿಯ ನ್ಯಾಯಮೂರ್ತಿಗಳ ಸಮಿತಿ) ಸದಸ್ಯರ ಜೊತೆ ಚರ್ಚಿಸಿದ್ದಾರೆ, ಅವರು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಖನ್ನಾ ಅವರು ಸಿಜೆಐ ಸ್ಥಾನದಿಂದ ಮೇ 13ಕ್ಕೆ ನಿವೃತ್ತರಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.