ADVERTISEMENT

ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಹೇಳಿಕೆಗೆ ವ್ಯಾಪಕ ಟೀಕೆ

ಜಾತಿ ಆಧಾರಿತ ಮೀಸಲಾತಿ ವಿವಾದ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:46 IST
Last Updated 24 ಜುಲೈ 2019, 19:46 IST
ವಿ. ಚಿದಂಬರೇಶ್‌
ವಿ. ಚಿದಂಬರೇಶ್‌   

ತಿರುವನಂತಪುರ: ಜಾತಿ ಆಧಾರಿತ ಮೀಸಲಾತಿ ಕುರಿತು ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ವಿ.ಚಿದಂಬರೇಶ್‌ ಹೇಳಿಕೆ ಕಟು ಟೀಕೆಗೆ ಗುರಿಯಾಗಿದೆ.

ಕಳೆದ ವಾರ ಕೊಚ್ಚಿಯಲ್ಲಿ ನಡೆದ ತಮಿಳು ಬ್ರಾಹ್ಮಣರ ಜಾಗತಿಕ ಸಭೆಯಲ್ಲಿ ಚಿತಾಂಬರೇಶ್‌ ಅವರು, ‘ಕೇವಲ ಜಾತಿ ಆಧಾರಿತ ಮೀಸಲಾತಿ ಅಗತ್ಯವೇ ಎನ್ನುವುದು ಚರ್ಚೆಯಾಗಬೇಕು. ನಾನು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಬ್ರಾಹ್ಮಣರಲ್ಲಿ ಎಲ್ಲ ರೀತಿಯ ಉತ್ತಮ ಗುಣಗಳಿವೆ. ಹೀಗಾಗಿ, ಎಂದಿಗೂ ಉನ್ನತ ಸ್ಥಾನದಲ್ಲಿದ್ದು ಎಲ್ಲವನ್ನೂ ನಿಯಂತ್ರಿಸುವ ಅಧಿಕಾರ ಹೊಂದಿರಬೇಕು’ ಎಂದು ಅವರು ಹೇಳಿದ್ದರು.

‘ಜಾತಿ ಆಧಾರಿತ ಮೀಸಲಾತಿ ಬದಲು ಆರ್ಥಿಕತೆ ಆಧಾರಿತ ಮೀಸಲಾತಿ ಪರ ದನಿ ಎತ್ತಲು ಅಥವಾ ಹೋರಾಟ ನಡೆಸಲು ವೇದಿಕೆಗಳಿವೆ. ಈ ಬಗ್ಗೆ ನಿಮಗೆ ನೆನಪು ಮಾಡಿಕೊಡುತ್ತಿದ್ದೇನೆ ಅಥವಾ ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಹೇಳಿದ್ದರು.

ADVERTISEMENT

‘ಶೇಕಡ 10ರಷ್ಟು ಆರ್ಥಿಕ ಮೀಸಲಾತಿ ದೊರೆತರೂ ಕೆನೆಪದರ ವಲಯದಲ್ಲಿ ಇಲ್ಲದ ಅಡುಗೆ ಮಾಡುವ ವೃತ್ತಿಯಲ್ಲಿರುವ ಬ್ರಾಹ್ಮಣ ಸಮುದಾಯದ ವ್ಯಕ್ತಿಯ ಪುತ್ರನಿಗೆ ಯಾವುದೇ ರೀತಿಯ ಮೀಸಲಾತಿ ದೊರೆಯುವುದಿಲ್ಲ. ಆದರೆ, ಇದೇ ಪರಿಸ್ಥಿತಿಯಲ್ಲಿರುವ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯ ಪುತ್ರನಿಗೆ ಮೀಸಲಾತಿ ದೊರೆಯುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಚಿತಾಂಬರೇಶ್‌ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ದಲಿತರ ಹಕ್ಕುಗಳ ಬಗ್ಗೆ ಹೋರಾಟ ನಡೆಸುತ್ತಿರುವ ಕೇರಳದ ಸನ್ನಿ ಕಪ್ಪಿಕಾಡು,’ ಇಂತಹ ನ್ಯಾಯ
ಮೂರ್ತಿ ಮುಂದೆ ಮೀಸಲಾತಿ ಪ್ರಕರಣ ಬಂದರೆ ಯಾವ ರೀತಿಯ ತೀರ್ಪು ಬರುತ್ತದೆ ಎನ್ನುವುದನ್ನು ಮೊದಲೇ ಊಹಿಸಿಕೊಳ್ಳಬಹುದು. ಸಾಂವಿಧಾನಿಕ ಹುದ್ದೆ ಹೊಂದಿರುವವರು ಈ ರೀತಿ ಹೇಳಿಕೆ ನೀಡುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.