ADVERTISEMENT

ವಜಾಗೊಂಡ ಉದ್ಯೋಗಿಗೆ ನಿವೃತ್ತಿ ನಂತರದ ಸೌಲಭ್ಯ ಇಲ್ಲ: ಕೇಂದ್ರ ಸರ್ಕಾರ

ಪಿಂಚಣಿ ನಿಯಮಗಳಿಗೆ ಕೇಂದ್ರ ಸರ್ಕಾರದ ತಿದ್ದುಪಡಿ

ಪಿಟಿಐ
Published 27 ಮೇ 2025, 15:37 IST
Last Updated 27 ಮೇ 2025, 15:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಪಿಂಚಣಿ ನಿಯಮಗಳಿಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಪಿಎಸ್‌ಯು) ವಜಾಗೊಂಡ ಅಥವಾ ತಗೆದುಹಾಕಲಾದ ಉದ್ಯೋಗಿಗಳಿಗೆ ಇನ್ನು ಮುಂದೆ ನಿವೃತ್ತಿ ನಂತರದ ಸೌಲಭ್ಯಗಳು ಸಿಗುವುದಿಲ್ಲ. ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದೆ.

ಸಿಬ್ಬಂದಿ ಸುಧಾರಣಾ ಇಲಾಖೆಯು ಕೇಂದ್ರ ನಾಗರಿಕ ಸೇವಾ (ಪಿಂಚಣಿ) ಅಧಿನಿಯಮ–2021ರಲ್ಲಿ ಹಲವು ಬದಲಾವಣೆಗಳನ್ನು ಚಾಲ್ತಿಗೆ ತಂದಿದೆ. 

ADVERTISEMENT

ದುರ್ನಡತೆ ಆಧಾರದಲ್ಲಿ ಸರ್ಕಾರಿ ಉದ್ಯೋಗಿಯ ವಜಾ ಅಥವಾ ಹೊರಹಾಕುವ ನಿರ್ಧಾರ ಪರಿಶೀಲಿಸುವ ಅಧಿಕಾರವು ಆಡಳಿತ ಸುಧಾರಣಾ ಇಲಾಖೆಗೆ ಇದೆ ಎಂದೂ ಸರ್ಕಾರ ತಿಳಿಸಿದೆ.

ಇತ್ತೀಚೆಗೆ ಅಧಿಸೂಚನೆಗೊಂಡ ಕೇಂದ್ರ ನಾಗರಿಕ ಸೇವಾ (ಪಿಂಚಣಿ) ತಿದ್ದುಪಡಿ ನಿಯಮ–2025ರ ಪ್ರಕಾರ, ‘ದುರ್ನಡತೆ ಆಧಾರದ ಮೇಲೆ ಸಾರ್ವಜನಿಕ ವಲಯದ ಉದ್ಯೋಗಿ ವಿರುದ್ಧ ವಜಾ ಕ್ರಮ ಕೈಗೊಂಡಲ್ಲಿ ಆತನ ನಿವೃತ್ತಿ ನಂತರದ ಸೌಲಭ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಸರ್ಕಾರದ ಅಡಿಯಲ್ಲಿ ಸಲ್ಲಿಸಿದ ಸೇವೆಗೂ ಇದು ಅನ್ವಯ ಆಗಲಿದೆ’ ಎಂದು ಹೇಳಿದೆ.

ಈ ಹಿಂದಿನ ನಿಯಮಗಳಲ್ಲಿ ಸಾರ್ವಜನಿಕ ವಲಯದ ಉದ್ಯೋಗಿಯ ನಿವೃತ್ತಿ ನಂತರದ ಸೌಲಭ್ಯಗಳ ಮುಟ್ಟುಗೋಲು ಅವಕಾಶ ಇರಲಿಲ್ಲ.

ಅಲ್ಲದೇ ಉದ್ಯೋಗಿಯ ಪಿಂಚಣಿ ಮತ್ತು ಕುಟುಂಬ ಪಿಂಚಣಿಯ ಮುಂದುವರಿಕೆ ಅಥವಾ ಮಂಜೂರಾತಿ ಅವಕಾಶಗಳು ಭವಿಷ್ಯದ ಆತನ ಉತ್ತಮ ನಡವಳಿಕೆಯನ್ನು ಅವಲಂಬಿಸಿರುತ್ತದೆ ಮತ್ತು ಸಹಾನುಭೂತಿ ಭತ್ಯೆಗೂ ಇದು ಅನ್ವಯ ಆಗಲಿದೆ ಎಂದು ಹೊಸ ನಿಯಮ ಹೇಳುತ್ತದೆ.

2003ರ ಡಿಸೆಂಬರ್ 31ರಂದು ಮತ್ತು ಅದಕ್ಕೂ ಮುನ್ನ ನೇಮಕವಾದ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರ ಸಾರ್ವಜನಿಕ ಸೇವಾ(ಪಿಂಚಣಿ) ನಿಯಮವು–2021 ಅನ್ವಯಿಸುತ್ತದೆ. ರೈಲ್ವೆ ಉದ್ಯೋಗಿಗಳು, ತಾತ್ಕಾಲಿಕ ಮತ್ತು ದಿನ ಗುತ್ತಿಗೆ ಆಧಾರದ ಉದ್ಯೋಗಿಗಳು, ಐಎಎಸ್‌, ಐಪಿಎಸ್‌ ಮತ್ತು ಭಾರತೀಯ ಅರಣ್ಯ ಸೇವೆ ಸೇರಿ ಇತರರಿಗೆ ಇದು ಅನ್ವಯಿಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.